ಹಸುವಿನ ಮೇವಿಗೆ ಬಳಸುವ ಹುಲ್ಲು ಆ ಜೀವಿಯ ಜೀವ ಹಿಂಡುತ್ತಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಪೆಂಡೆ ಹುಲ್ಲು ಖರೀದಿಸುವವರ ಸಂಖ್ಯೆ ಹೆಚ್ಚಾಗಿದ್ದು, ಹುಲ್ಲಿಗೆ ಕಟ್ಟುವ ಟಾಯಿನ್ ದಾರದಿಂದಾಗಿ ಜಾನುವಾರುಗಳು ಸಾವನಪ್ಪುತ್ತಿವೆ.
ಕಳೆದ ವಾರ ಶಿರಸಿಯಲ್ಲಿ ಸಹ ಹಸುವೊಂದರ ನಾಲಿಗೆ ತುಂಡಾಗಿದೆ. ಜಾನ್ಮನೆಯ ಕುಕ್ರಿ ಬಳಿಯ ರೈತರೊಬ್ಬರು ಖರೀದಿಸಿದ ಒಣ ಹುಲ್ಲಿನಲ್ಲಿ ಟಾಯಿನ್ ದಾರ ಅಡಗಿ ಕೂತಿದ್ದು, ಅದರ ಅರಿವಿಲ್ಲದೇ ಹೈನುಗಾರರು ಹುಲ್ಲನ್ನು ಹಸುವಿಗೆ ಹಾಕಿದ್ದಾರೆ. ಪರಿಣಾಮ ಹಸುವಿನ ನಾಲಿಗೆ ಎರಡು ಭಾಗವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭತ್ತ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಹೈನುಗಾರಿಕೆ ಸಹ ಕ್ಷೀಣಿಸುತ್ತಿದ್ದು, ಅಲ್ಲಿ-ಇಲ್ಲಿ ಜಾನುವಾರು ಸಾಕಾಣಿಕೆ ಮಾಡುವವರಿಗೂ ಮೇವಿನ ಕೊರತೆ ಎದುರಾಗಿದೆ. ಹೀಗಾಗಿ ಹಳಿಯಾಳ, ಜೊಯಿಡಾ, ಮುಂಡಗೋಡು ಭಾಗದಿಂದ ಜಿಲ್ಲೆಯ ಹಲವು ಕಡೆ ಮೇವು ಸರಬರಾಜಾಗುತ್ತದೆ. ಹಾವೇರಿ, ಹಾನಗಲ್ ಭಾಗದಿಂದಲೂ ಒಣ ಮೇವು ತರಿಸುವವರಿದ್ದಾರೆ. ಕಳೆದ ಒಂದು ದಶಕದಿಂದ ಹುಲ್ಲುಗಳನ್ನು ಪೆಂಡೆ ರೂಪದಲ್ಲಿ ತಂದು ಕೊಡುವವರ ಸಂಖ್ಯೆ ಹೆಚ್ಚಾಗಿದೆ.
ಹುಲ್ಲಿನ ವಜ್ಜೆ ಹೋಗಿ ಪೆಂಡೆ ಬಂದಾಗಲಿನಿAದ ಹೊಸ ಸಮಸ್ಯೆ ಹುಟ್ಟಿದೆ. ಪೆಂಡೆ ಸುತ್ತಲು ಬಳಸುವ ದಾರ ನೈಸರ್ಗಿಕವಾಗಿರದಿರುವುದು ಜಾನುವಾರುಗಳಿಗೆ ಕಂಟಕವಾಗಿದೆ. ಕೆಲವಡೆ ಪೆಂಡೆಗೆ ಹುಲ್ಲಿನಿಂದಲೇ ನಿರ್ಮಿಸಿದ ದಾರ ಕಟ್ಟಲಾಗುತ್ತದೆ. ಅದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ, ಹಲವು ಕಡೆ ಹುಲ್ಲಿನ ಜೊತೆ ಟಾಯಿನ್ ದಾರ ಸಹ ಹಸುವಿನ ಹೊಟ್ಟೆ ಸೇರುತ್ತಿದೆ.
ಹೊಟ್ಟೆ ಸೇರಿದ ಟಾಯಿನ್ ದಾರ ಹಸು ಮೆಲಕು ಹಾಕುವಾಗ ನಾಲಿಗೆಗೆ ಬರುತ್ತದೆ. ಅಲ್ಲಿ ಸುತ್ತಿಕೊಂಡು ನಾಲಿಗೆಯನ್ನು ತುಂಡರಿಸುತ್ತದೆ. ಸಾಕಷ್ಟು ರೈತರು ಹುಲ್ಲಿನಿಂದ ದಾರ ಬೇರ್ಪಡಿಸಿ ಹಾಕಿದರೂ ಕೆಲವೊಮ್ಮೆ ದಾರ ಅಲ್ಲಿಯೇ ಉಳಿದು ಅಪಾಯ ಸೃಷ್ಠಿಸುತ್ತಿದೆ. `ದಾರ ನುಂಗಿದ ಜಾನುವಾರುಗಳು ಆಹಾರ ಬಿಡುತ್ತವೆ. ತಕ್ಷಣ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದರೆ ಅವು ಉಳಿಯುತ್ತವೆ. ನಾಲಿಗೆ ತುಂಡಾದರೆ ಆಹಾರ ಸೇವಿಸಲಾಗದೇ ಸಾವನಪ್ಪುತ್ತವೆ’ ಎಂಬುದು ತಜ್ಞ ಪಶುವೈದ್ಯರ ಮಾತು.