ಕೈಗಾದಲ್ಲಿ ದುಡಿಯುವುದಕ್ಕಾಗಿ ಜಾರ್ಖಂಡದಿoದ ಬಂದಿದ್ದ ಸುಭಾಷ್ ಓರಾನ್ ಬಸ್ಸಿನಿಂದ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅದು ಫಲಕಾರಿಯಾಗದ ಕಾರಣ ಬಾವಿಯೊಳಗೆ ನೇಣು ಬಿಗಿದುಕೊಂಡು ಸಾವನಪ್ಪಿದ್ದಾರೆ!
24 ವರ್ಷದ ಸುಭಾಷ್ ಓರಾನ್ ಕೈಗಾದ ಬೇಕಂ ಕಂಪನಿಯಲ್ಲಿ ಕೆಲಸಕ್ಕಿದ್ದರು. ಏಪ್ರಿಲ್ 12ರಂದು ಅವರು ರಾಂಚಿ ರೈಲು ನಿಲ್ದಾಣದಲ್ಲಿ ತಮ್ಮ ಸಹಚರರ ಜೊತೆ ರೈಲು ಏರಿದರು. ಏಪ್ರಿಲ್ 14ರ ರಾತ್ರಿ ಆ ರೈಲು ಕಾರವಾರಕ್ಕೆ ಬಂದಾಗ ಎಲ್ಲರ ಜೊತೆ ಕೆಳಗಿಳಿದರು. ಆ ರಾತ್ರಿ 10.45ಕ್ಕೆ ಊಟ ಮಾಡಿ, ಕೈಗಾ ಕಡೆ ಹೊರಟ ಕಂಪನಿಯ ಬಸ್ಸು ಏರಿದರು.
ರಾತ್ರಿ 11.45ರ ಆಸುಪಾಸಿಗೆ ಕಿನ್ನರ ಗ್ರಾಮದ ಘಡಸಾಯಿ ಕ್ರಾಸಿನ ಬಳಿ ಅವರು ಬಸ್ಸಿನಿಂದ ಹಾರಿದರು. ಎಲ್ಲರೂ ಸೇರಿ ಅವರ ಹುಡುಕಾಟ ನಡೆಸಿದರು. ರಾತ್ರಿಯಾಗಿದ್ದರಿಂದ ಸುಭಾಷ್ ಓರಾನ್ ಎಲ್ಲಿಯೂ ಸಿಗಲಿಲ್ಲ. ಹೀಗಾಗಿ ಬಸ್ಸಿನಲ್ಲಿದ್ದವರೆಲ್ಲರೂ ಮಲ್ಲಾಪುರಕ್ಕೆ ತೆರಳಿದರು. ಮರುದಿನ ಬೆಳಗ್ಗೆ ಮತ್ತೆ ಕಿನ್ನರಕ್ಕೆ ಬಂದು ಸುಭಾಷ್ ಓರಾನ್ ಅವರ ಹುಡುಕಾಟ ನಡೆಸಿದರು.
ಆದರೆ, ಎಲ್ಲಿಯೂ ಸುಭಾಷ್ ಓರಾನ್ ಸಿಗಲಿಲ್ಲ. ಅಷ್ಟರೊಳಗೆ ಊರಿನ ಬಾವಿಯೊಂದರಲ್ಲಿ ಶವ ನೇತಾಡುತ್ತಿರುವ ಬಗ್ಗೆ ಸುದ್ದಿ ಬಂದಿತು. ಅಲ್ಲಿ ಹೋಗಿ ನೋಡಿದಾಗ ಘಡಸಾಯಿಯ ಘನಶ್ಯಾಮ ಗುನಗಿ ಅವರ ಮನೆ ಪಕ್ಕದ ಬಾವಿಯಲ್ಲಿ ಸುಭಾಷ್ ಓರಾನ್ ನೇಣು ಹಾಕಿಕೊಂಡಿದ್ದರು. ಮಾನಸಿಕ ಖಿನ್ನತೆಯಿಂದ ಸುಭಾಷ್ ಓರಾನ್ ಆತ್ಮಹತ್ಯೆಗೆ ಶರಣಾದ ಬಗ್ಗೆ ಅವರ ಸಹಚರ ಫೇಕು ಲೊಹರಾ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡರು.