ಯಲ್ಲಾಪುರದ ಕುಬೇರ್ ಹೊಟೇಲ್ ಅಂಚಿನಲ್ಲಿ ಚಹಾ ಅಂಗಡಿಯಲ್ಲಿ ಸರಾಯಿ ಮಾರಾಟ ನಡೆಯುತ್ತಿರುವುದನ್ನು ಪಿಎಸ್‌ಐ ಯಲ್ಲಾಲಿಂಗ ಕನ್ನೂರು ಪತ್ತೆ ಮಾಡಿದ್ದಾರೆ.
ತಾತ್ಕಾಲಿಕ ಶೆಡ್ ನಿರ್ಮಿಸಿ ಸರಾಯಿ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ ಹುಲಿಮನೆಯ ಮಧುಕರ ನಾಯ್ಕ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಏಪ್ರಿಲ್ 17ರಂದು ಪಿಎಸ್‌ಐ ಯಲ್ಲಾಲಿಂಗ ಕನ್ನೂರು ಅವರು ತಮ್ಮ ತಂಡದೊoದಿಗೆ ಚಹಾ ಅಂಗಡಿ ಮೇಲೆ ದಾಳಿ ನಡೆಸಿದರು. ಅಲ್ಲಿ ಕಾನೂನುಬಾಹಿರವಾಗಿ ಅಕ್ರಮ ಮದ್ಯ ದಾಸ್ತಾನು ಮಾಡಿರುವುದನ್ನು ಅವರು ಪತ್ತೆ ಮಾಡಿದರು. ಅಂಗಡಿಯ ತಾತ್ಕಾಲಿಕ ಶೆಡ್ ಒಳಗೆ ಮದ್ಯ ಸೇವನೆಗೆ ಅವಕಾಶ ಕೊಟ್ಟಿರುವುದಕ್ಕಾಗಿ ಮಧುಕರ ನಾಯ್ಕರ ವಿರುದ್ಧ ಪ್ರಕರಣ ದಾಖಲಿಸಿದರು. ಜೊತೆಗೆ ಅಲ್ಲಿದ್ದ 160ರೂ ಹಣ, ಖಾಲಿ ಲೋಟ, 4 ಸರಾಯಿ ಪ್ಯಾಕೇಟ್ ಹಾಗೂ ನೀರಿನ ಬಾಟಲಿಗಳನ್ನು ವಶಕ್ಕೆಪಡೆದರು.
ಪುಟ್‌ವೆರ್ ಅಂಗಡಿಯವನ ಸ್ಕೂಟರ್ ಕಳ್ಳತನ
ಭಟ್ಕಳದ ಮಾರಿಕಟ್ಟಾದಲ್ಲಿ ರೋಶನ್ ಪುಟ್‌ವೇರ್ ಅಂಗಡಿ ಹೊಂದಿರುವ ಜೈನುಲಾಬಿದ್ದಿನ್ ಅವರ ಸ್ಕೂಟರ್ ಕಳ್ಳತನವಾಗಿದೆ.
ಭಟ್ಕಳದ ಮುಗ್ದುಂ ಕಾಲೋನಿಯ ಜೈನುಲಾಬಿದ್ದಿನ್ ಅವರು ರೆಹಮನಿಯಾ ಬೇಕರಿ ಹಿಂದಿನ ಲೌನಾ ಕಾಂಪ್ಲೇಕ್ಸಿನಲ್ಲಿ ವಾಸವಾಗಿದ್ದಾರೆ. ಮಾರ್ಚ 6ರಂದು ಸಂಜೆ ಅವರು ತಮ್ಮ ಮನೆ ಕಂಪೌ0ಡಿನಲ್ಲಿ ಸುಜಕಿ ಸ್ಕೂಟರ್ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಅಲ್ಲಿ ಸ್ಕೂಟರ್ ಕಾಣಲಿಲ್ಲ. ಇಷ್ಟು ದಿನಗಳ ಕಾಲ ಎಲ್ಲಾ ಕಡೆ ಹುಡುಕಾಟ ನಡೆಸಿದರು. ಅದಾಗಿಯೂ ಸಿಗದ ಕಾರಣ ಅವರು ಪೊಲೀಸ್ ದೂರು ನೀಡಿದರು. `50 ಸಾವಿರ ರೂ ಮೌಲ್ಯದ ಸ್ಕೂಟರ್ ಕಳ್ಳನನ್ನು ಹುಡುಕಿ. ತನ್ನ ಸ್ಕೂಟರ್ ಮರಳಿಸಿ’ ಎಂದವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಬೈಕಿಗೆ ಗುದ್ದಿದ ಕಾರು: ಗಾಯ
ಸಿದ್ದಾಪುರದ ನಾರಾಯಣ ನಾಯ್ಕ ಅವರು ಸಂಚರಿಸುತ್ತಿದ್ದ ಬೈಕಿಗೆ ಕಾರು ಗುದ್ದಿದೆ. ಪರಿಣಾಮ ನಾರಾಯಣ ನಾಯ್ಕ ಅವರಿಗೆ ಅಲ್ಲಲ್ಲಿ ಪೆಟ್ಟಾಗಿದೆ.
ಸಿದ್ದಾಪುರದ ಹಲಗೇರಿಯ ನಾರಾಯಣ ನಾಯ್ಕ (63) ರೈತಾಪಿ ಕೆಲಸ ಮಾಡಿಕೊಂಡಿದ್ದರು. ಏಪ್ರಿಲ್ 17ರ ಮಧ್ಯಾಹ್ನ ಸಿದ್ದಾಪುರ ಪೇಟೆಗೆ ಬಂದಿದ್ದ ಅವರು ಭಗತ್ ಸಿಂಗ್ ಸರ್ಕಲ್ ಹತ್ತಿರ ಬೈಕಿನಲ್ಲಿ ಹೋಗುತ್ತಿದ್ದರು. ಬಸ್ ನಿಲ್ದಾಣದ ಕಡೆಯಿಂದ ಸಾಗರ ಕಡೆ ಹೋಗುತ್ತಿದ್ದ ಕಾರು ಹಿಂದಿನಿAದ ಅವರ ಬೈಕಿಗೆ ಗುದ್ದಿತು.
ಶಿವಮೊಗ್ಗ ಹೊಸನಗರದ ಕಬೀರ ಎಚ್ ಬಿ ಆ ಕಾರು ಚಲಾಯಿಸುತ್ತಿದ್ದರು. ಅವರ ನಿಷ್ಕಾಳಜಿಯ ಕಾರು ಚಾಲನೆಯಿಂದ ನಾರಾಯಣ ನಾಯ್ಕ ಅವರು ಗಾಯಗೊಂಡರು. ತಲೆ ಹಾಗೂ ಕಾಲಿಗೆ ಗಾಯವಾಗಿದ್ದರಿಂದ ನಾರಾಯಣ ನಾಯ್ಕ ಅವರು ಆಸ್ಪತ್ರೆ ಸೇರಿದರು. ಅವರ ಸಹೋದರ ಜೈರಾಮ ನಾಯ್ಕ ಅವರು ಕಾರು ಚಾಲಕನ ವಿರುದ್ಧ ಪೊಲೀಸ್ ದೂರು ನೀಡಿದರು.
ಮೊಬೈಲ್ ಟವರ್ ಕೆಳಗೆ ಮಟ್ಕಾ ಆಟ!
ಕುಮಟಾ ಮೂರೂರಿನ ಬಿಎಸ್‌ಎನ್‌ಎಲ್ ಟವರ್ ಕೆಳಗೆ ಗೂಡಂಗಡಿ ನಡೆಸುವ ಗಣಪತಿ ಗೌಡ ಅವರು ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಪಿಎಸ್‌ಐ ಸಾವಿತ್ರಿ ನಾಯಕ ಅವರು ಗಣಪತಿ ಗೌಡರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ.
ಮೂರುರು ಹಟ್ಟಿಕೇರಿಯ ಗಣಪತಿ ಗೌಡ ಅವರು ಬಿಎಸ್‌ಎನ್‌ಎಲ್ ಟವರ್ ಕೆಳಗೆ ಗೂಡಂಗಡಿ ಹೊಂದಿದ್ದರು. ಅಲ್ಲಿಯೇ ಅವರು ಮಟ್ಕಾ ಆಡಿಸಿ ಇನ್ನಷ್ಟು ಹಣ ಸಂಪಾದಿಸುತ್ತಿದ್ದರು. ಕಾನೂನುಬಾಹಿರ ಆಟ ಆಡಿಸಿದ ಕಾರಣ ಅವರಿಗೆ ಕಮಿಷನ್ ಸಿಗುತ್ತಿದ್ದು, 1ರೂಪಾಯಿಗೆ 80ರೂ ಕೊಡುವುದಾಗಿ ನಂಬಿಸಿ ಜನರಿಂದ ಹಣ ಪಡೆಯುತ್ತಿದ್ದರು.
ಈ ವಿಷಯ ಅರಿತ ಪಿಎಸ್‌ಐ ಸಾವಿತ್ರಿ ನಾಯಕ ಏಪ್ರಿಲ್ 16ರ ಸಂಜೆ ಗೂಡಂಗಡಿ ಮೇಲೆ ದಾಳಿ ನಡೆಸಿದರು. ಆ ವೇಳೆ ಗಣಪತಿ ಗೌಡ ಅವರು ಸಂಗ್ರಹಿಸಿದ್ದ 740ರೂ ಹಣ ಹಾಗೂ ಮಟ್ಕಾ ಪರಿಕ್ಕರಗಳನ್ನು ವಶಕ್ಕೆಪಡೆದರು. ಅದಾದ ನಂತರ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.
ಬೈಕಿಗೆ ಗುದ್ದಿದ ಪಿಕಪ್: ಪ್ರತ್ಯಕ್ಷದರ್ಶಿಯ ದೂರು
ಯಲ್ಲಾಪುರದ ಮಾವಿನಮನೆ ಬಳಿಯ ಸೊನಗಾರ ಹಳ್ಳಿಯಲ್ಲಿ ಪಿಕಪ್ ಹಾಗೂ ಬೈಕ್ ನಡುವೆ ಅಪಘಾತವಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿದ್ದು, ಬೈಕ್ ಜಖಂ ಆಗಿದೆ.
ಬಾಸಲ್ ಗ್ರಾಮದ ಸೊನಗಾರ ಹಳ್ಳಿಯ ಅನಂತ ಗೌಡ ಅವರ ಮನೆ ಮುಂದೆ ಈ ಅಪಘಾತ ನಡೆದಿದ್ದು, ಪಿಕಪ್ ವಾಹನ ಚಾಲಕನ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಹೀಗಾಗಿ ಪಿಕಪ್ ಓಡಿಸುತ್ತಿದ್ದ ಹರನಗದ್ದೆಯ ಪ್ರಶಾಂತ ಮರಾಠಿ ವಿರುದ್ಧ ಅನಂತ ಗೌಡ ಅವರು ಪೊಲೀಸ್ ದೂರು ನೀಡಿದ್ದಾರೆ.
`ಏಪ್ರಿಲ್ 16ರಂದು ಬಾಸಲ್ ಕಡೆಯಿಂದ ಚಾವಡಿ ಕಡೆ ಜೋರಾಗಿ ಪಿಕಪ್ ವಾಹನ ಬಂದಿತು. ಎದುರಿನಿಂದ ನಿಧಾನವಾಗಿ ಬರುತ್ತಿದ್ದ ಬೈಕಿಗೆ ಪಿಕಪ್ ವೇಗವಾಗಿ ಗುದ್ದಿತು. ಅದರಿಂದ ಬೈಕ್ ಸವಾರನಿಗೆ ಪೆಟ್ಟಾಗಿದ್ದು, ಬೈಕ್ ಸಹ ಹಾನಿಗೊಳಗಾಗಿದೆ’ ಎಂದು ಅನಂತ ಗೌಡ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
`ತಮ್ಮ ಮನೆ ಮುಂದೆ ವೇಗವಾಗಿ ವಾಹನ ಓಡಿಸಿದ ಪ್ರಶಾಂತ ಮರಾಠಿ ವಿರುದ್ಧ ಕಾನೂನು ಕ್ರಮ ಜರುಗಿಸಿ’ ಎಂದವರು ಪೊಲೀಸ್ ದೂರಿನಲ್ಲಿ ಹೇಳಿದ್ದಾರೆ.