ಹೊನ್ನಾವರದ ಕಾಸರಕೋಡಿನಲ್ಲಿ ವಾಣಿಜ್ಯ ಬಂದರು ವಿರೋಧಿ ಹೋರಾಟಕ್ಕೆ ಶೃಂಗೇರಿ ಪೀಠದ ವಿಧುಶೇಖರ ಭಾರತಿ ಸ್ವಾಮೀಜಿ ಬೆಂಬಲ ನೀಡಿದ್ದಾರೆ. ಮೀನುಗಾರರ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅವರು `ಹೋರಾಟಗಾರರ ಜೊತೆ ತಾನಿದ್ದೇನೆ’ ಎಂಬ ಸಂದೇಶ ರವಾನಿಸಿದರು.
ಹೊನ್ನಾವರ ಪಟ್ಟಣದ ಬಜಾರ್ ರಸ್ತೆಯಲ್ಲಿ ಶ್ರೀ ಶಾರದಾಂಬ ದೇವಸ್ಥಾನದ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಶ್ರೀಗಳು ಆಗಮಿಸಿದ್ದರು. ಟೊಂಕಾದ ಮೀನುಗಾರರು ಗುರುಗಳನ್ನು ಭೇಟಿಯಾಗಿ ತಮ್ಮ ಸಮಸ್ಯೆ ವಿವರಿಸಿದರು. ವಾಣಿಜ್ಯ ಬಂದರು ಯೋಜನೆಯಿಂದ ಆಗುವ ಸಮಸ್ಯೆಗಳ ಬಗ್ಗೆ ಮೀನುಗಾರರು ಮನವರಿಕೆ ಮಾಡಿದರು.
ಮೀನುಗಾರರ ಕುಟುಂಬದ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ವಿವರಿಸಿದರು. `ನಮ್ಮ ಬದುಕು ಕಾಪಾಡಿ’ ಎಂದು ಅಂಗಲಾಚಿದರು. ಮೀನುಗಾರರ ಅಳಲು ಆಲಿಸಿದ ಸ್ವಾಮೀಜಿ ಕಾರ್ಯಕ್ರಮ ಮುಗಿಸಿ ನೇರವಾಗಿ ಯೋಜನೆಯ ಸ್ಥಳಕ್ಕೆ ತೆರಳಿದರು. ಅಲ್ಲಿನ ಸಮಸ್ಯೆಗಳ ಬಗ್ಗೆ ಅರಿತು ಮೀನುಗಾರರಿಗೆ ಅಭಯ ನೀಡಿದರು.
`ಇಲ್ಲಿನ ಮೀನುಗಾರರ ಕುಟುಂಬಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ’ ಎಂದು ಸ್ವಾಮೀಜಿ ಭರವಸೆ ನೀಡಿದರು.