ಪಶ್ಚಿಮಘಟ್ಟದ ಕಾಡನ್ನು ಇನ್ನಷ್ಟು ಸಂಪದ್ಬರಿತವಾಗಿಸಲು ಕೆನರಾ ಸರ್ಕಲ್ ಉತ್ಸಾಹ ತೋರಿದ್ದು, ಈ ಬಾರಿ ಬಗೆ ಬಗೆಯ ಗಿಡಗಳನ್ನು ಬೆಳಸಲು ಚಿಂತನೆ ನಡೆಸಿದೆ. ಇದಕ್ಕೆ ಪೂರಕವಾಗಿ ಕುಂದರಗಿ ಬಳಿಯ ಭರಣಿ ಸಸ್ಯಕ್ಷೇತ್ರದಲ್ಲಿ 40ಕ್ಕೂ ಅಧಿಕ ಜಾತಿಯ ಗಿಡಗಳಿವೆ. ಅದರಲ್ಲಿಯೂ ಮುಖ್ಯವಾಗಿ ರೈತರಿಗೆ ಅನುಕೂಲವಾಗುವ ಗಿಡಗಳೇ ಇಲ್ಲಿ ಹೆಚ್ಚಿಗೆ ಕಾಣಿಸುತ್ತವೆ.
ಮಂಚಿಕೇರಿ ಉಪ ಅರಣ್ಯ ವಿಭಾಗಕ್ಕೆ ಈ ನರ್ಸರಿ ಬರುತ್ತದೆ. ಅರಣ್ಯ ಆರಾಧಕರಾದ ಕಲ್ಲಪ್ಪ ಹಾಗೂ ತಾರಾ ಎಂಬಾತರು ನರ್ಸರಿಯ ಉಸ್ತುವಾರಿಗಳು. ಪ್ರತಿ ಗಿಡವನ್ನು ಮಗುವಿನಂತೆ ಕಾಪಾಡಿ ಅವುಗಳಿಗೆ ನೀರುಣಿಸುವುದು ಅವರ ನಿತ್ಯದ ಕಾಯಕ. ಆಗಮಿಸಿದ ಪ್ರತಿಯೊಬ್ಬರನ್ನು ಪ್ರೀತಿಯಿಂದ ಸ್ವಾಗತಿಸಿ ಅವರಿಗೆ ಅಗತ್ಯ ಮಾಹಿತಿಯನ್ನು ಅವರು ನೀಡುತ್ತಾರೆ. ಬೇಕಾದವರಿಗೆ ಬೇಕಾದ ಗಿಡ ಕೊಡುವ ಹೊಣೆಯೂ ಅವರ ಮೇಲಿದೆ. ಹಲಸು, ನೇರಳೆ, ನೆಲ್ಲಿ, ಮುರುಗಲು, ರಾಮಪತ್ರೆ, ಉಪ್ಪಾಗೆ, ಪೇರಲೆ ಮೊದಲಾದ ಸಸ್ಯಗಳ ಬಗ್ಗೆ ಸಾಕಷ್ಟು ಅಧ್ಯಯನವನ್ನು ಸಹ ನಡೆಸಿದ್ದಾರೆ. ಮಲೆನಾಡಿನಲ್ಲಿ ಅಳಸಿ ಹೋಗುತ್ತಿರುವ ಕೌಲು, ಗಂಧಗರಿಗೆ, ಕಾಯಿಧೂಪ, ಬೂರುಗ ಗಿಡಗಳ ಬಗ್ಗೆ ಅವರಿಗೆ ಅಪಾರ ಕಾಳಜಿ.
2008ರಲ್ಲಿ ಶುರುವಾದ ಈ ನರ್ಸರಿ ಲಕ್ಷ ಸಂಖ್ಯೆಯಲ್ಲಿ ಗಿಡಗಳನ್ನು ಪರಿಸರಕ್ಕೆ ನೀಡಿದೆ. ಆರು ಎಕರೆ ಪ್ರದೇಶದ ನರ್ಸರಿಯಲ್ಲಿ ಹಸಿರು ಮನೆಯನ್ನು ನಿರ್ಮಿಸಲಾಗಿದೆ. ಅಲ್ಲಿಯೇ ಗಿಡಗಳ ಅಭಿವೃದ್ಧಿ ಕಾರ್ಯ ನಡೆಯುತ್ತದೆ. ಅಗತ್ಯ ಗೊಬ್ಬರ ಉಣಿಸುವಿಕೆ, ಆರೈಕೆ, ಪ್ರತಿ ಗಿಡದ ಬಗ್ಗೆಯೂ ವಿಶೇಷ ಕಾಳಜಿವಹಿಸುವ ಅರಣ್ಯ ರಕ್ಷಕರ ಪಾತ್ರ ಇಲ್ಲಿ ದೊಡ್ಡದು. ಚಿಕ್ಕ ಚಿಕ್ಕ ಗಿಡಗಳಿಗೆ 3ರೂ ಹಾಗೂ ದೊಡ್ಡ ಗಿಡಗಳಿಗೆ 6ರೂ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, `ಅರಣ್ಯ ಪ್ರೋತ್ಸಾಹ ಧನ’ ಯೋಜನೆ ಅಡಿ ಬೆಳೆದ ಗಿಡಗಳಿಗೆ 150ರೂವರೆಗೆ ಸಿಗುತ್ತದೆ.
– ಗಣಪತಿ ಬಾಳೆಗದ್ದೆ
Discussion about this post