ಉತ್ತರ ಕನ್ನಡ ಜಿಲ್ಲೆಯನ್ನು ಸೇರಿ ಪಶ್ಚಿಮಘಟ್ಟದ ವಿವಿಧ ಪ್ರದೇಶಗಳನ್ನು `ಪರಿಸರ ಸೂಕ್ಷ್ಮ’ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ವಿಜ್ಞಾನಿ ಕೆ ಕಸ್ತೂರಿ ರಂಗನ್ (84) ಅವರು ಶುಕ್ರವಾರ ನಿಧನರಾಗಿದ್ದಾರೆ.
ಕಸ್ತೂರಿ ರಂಗನ್ ಅವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋಗೆ 9 ವರ್ಷಗಳ ಕಾಲ ಅವರು ಅಧ್ಯಕ್ಷರಾಗಿದ್ದರು. ಅನೇಕ ಸಂಶೋಧನೆಗಳ ಮೂಲಕ ಭಾರತವೂ ಅಂತರಾಷ್ಟಿಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ನೋಡಿಕೊಂಡಿದ್ದರು. ಕೇಂದ್ರದ ಬಾಹ್ಯಾಕಾಶ ಮಂಡಳಿಯ ನಿರ್ದೇಶಕರಾಗಿ, ಭಾರತ ಸರ್ಕಾರದ ಕಾರ್ಯದರ್ಶಿಯಾಗಿ ಅವರು ಜವಾಬ್ದಾರಿ ನಿಭಾಯಿಸಿದ್ದರು.
ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲು ರಚಿಸಲಾದ ಮಾಧವ ಗಾಡಗೀಲ್ ನೇತ್ರತ್ವದ ಸಮಿತಿ ವಿವಾದದ ಹಿನ್ನಲೆ ಕೇಂದ್ರ ಸರ್ಕಾರವೂ ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಲು ಸಮಿತಿ ರಚಿಸಿತ್ತು. ಪರಿಸರ ಸೂಕ್ಷ್ಮ ಪ್ರದೇಶ ಶಿಫಾರಸ್ಸು ಮಾಡುವ ಉದ್ದೇಶದಿಂದ ರಚಿಸಲಾದ ಉನ್ನತ ಮಟ್ಟದ ಕಾರ್ಯಕಾರಿ ಗುಂಪಿನ ಅಧ್ಯಕ್ಷರಾಗಿ ಕಸ್ತೂರಿ ರಂಗನ್ ಅವರು ಸೇವೆ ಸಲ್ಲಿಸಿದ್ದರು.
ಉತ್ತರ ಕನ್ನಡ ಜಿಲ್ಲೆಯನ್ನು ಸೇರಿ ಪಶ್ಚಿಮಘಟ್ಟದ 6 ರಾಜ್ಯದ ಶೇ 37ರಷ್ಟು ಕ್ಷೇತ್ರವನ್ನು ಅವರು ಅಧ್ಯಯನ ಮಾಡಿದ್ದರು. ಸುಮಾರು 60,000 ಚ.ಕಿಮೀ ಪ್ರದೇಶವನ್ನು ಸೂಕ್ಷ್ಮ ವಲಯ ಎಂದು ಗುರುತಿಸಿದ್ದರು. ಈ ಬಗ್ಗೆ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಈ ವರದಿ ಜನ ಸಾಮಾನ್ಯರ ಜೀವನಕ್ಕೆ ಮಾರಕವಾಗಿದೆ ಎಂಬ ಅಭಿಪ್ರಾಯವ್ಯಕ್ತವಾಗಿತ್ತು. ಈ ಹಿನ್ನಲೆ ಅನೇಕರು ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿದ್ದರು.
ಕಸ್ತೂರಿ ರಂಗನ್ ಅವರ ನಿಧನಕ್ಕೆ ನ್ಯಾಯವಾದಿ ರವೀಂದ್ರ ನಾಯ್ಕ ಸಂತಾಪ ಸೂಚಿಸಿದರು.