ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸುತ್ತಿರುವ ಡಿವೈಎಸ್‌ಪಿ ಅಶ್ವಿನಿ ಬಿ ಅವರು ಮುರುಡೇಶ್ವರದ ಇಸ್ಪಿಟ್ ಅಡ್ಡೆಯ ಮೇಲೆಯೂ ಕಾರ್ಯಾಚರಣೆ ನಡೆಸಿದ್ದಾರೆ. ಅಂದರ್ ಬಾಹರ್ ಆಡುತ್ತಿದ್ದ ಏಳು ಜನರ ವಿರುದ್ಧ ಅವರು ಪ್ರಕರಣ ದಾಖಲಿಸಿದ್ದಾರೆ.
ಬಿ ಅಶ್ವಿನಿ ಅವರು ಕಾರವಾರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಸ್ಥಳೀಯ ಠಾಣೆಯ ಪೊಲೀಸರು ದಾಳಿ ನಡೆಸಲು ಹಿಂದೇಟು ಹಾಕುವ ಸ್ಥಳಗಳಲ್ಲಿ ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್‌ಪಿ ಬಿ ಅಶ್ವಿನಿ ಹಾಜರು. ಜಿಲ್ಲೆಯ ಹಲವು ಕಡೆ ಅವರು ಅಕ್ರಮ ಅಡ್ಡೆಗಳ ಮೇಲೆ ಅವರು ದಾಳಿ ನಡೆಸಿದ್ದಾರೆ. ಆದರೆ, ಎಲ್ಲಿಯೂ ಅವರ ಹೆಸರು ಮಾತ್ರ ಮುಂದೆ ಬಂದಿಲ್ಲ!
ಯಾರಿಗೂ ಹೇಳದೇ ತಮ್ಮದೇ ಆದ ತಂಡದೊoದಿಗೆ ಕಾರ್ಯಾಚರಣೆ ನಡೆಸುವ ಬಿ ಅಶ್ವಿನಿ ಅವರು ಅಲ್ಲಿನ ಅಕ್ರಮ ತಡೆದ ನಂತರ ಸ್ಥಳೀಯ ಪೊಲೀಸರಿಗೆ ಮಾಹಿತಿ ಕೊಡುತ್ತಾರೆ. ಆಗ ಅಲ್ಲಿಗೆ ಬರುವ ಸ್ಥಳೀಯ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸುತ್ತಾರೆ. ಸರ್ಕಾರಿ ದಾಖಲೆಗಳ ಪ್ರಕಾರ ಕಾನೂನು ಕ್ರಮ ಜರುಗಿಸಿದವರ ಹೆಸರು ಮಾತ್ರ ನಮೂದಾಗುವುದರಿಂದ ಬಿ ಅಶ್ವಿನಿ ಅವರ ಕಾರ್ಯಾಚರಣೆ ಬಗ್ಗೆ ಜನಸಾಮಾನ್ಯರಿಗೆ ಅರಿವಾಗುವುದಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಹಲವು ದೊಡ್ಡ ದೊಡ್ಡ ಅಕ್ರಮಗಳನ್ನು ಬಿ ಅಶ್ವಿನಿ ಅವರು ತಡೆದಿದ್ದಾರೆ. ಆದರೆ, ಬಹುತೇಕ ಇದೇ ಮೊದಲ ಬಾರಿಗೆ ಬಿ ಅಶ್ವಿನಿ ಅವರ ಹೆಸರು ದಾಖಲೆಗಳಲ್ಲಿಯೂ ನಮೂದಾಗಿದೆ. ಏಪ್ರಿಲ್ 26ರ ರಾತ್ರಿ ಮುರುಡೇಶ್ವರದ ಬೆಂಗ್ರೆ ರಸ್ತೆಯ ಪೆಟ್ರೋಲ್ ಬಂಕಿನ ಬಳಿ ಅಂದರ್ ಬಾಹರ್ ನಡೆಯುತ್ತಿರುವ ಬಗ್ಗೆ ಮಾಹಿತಿಪಡೆದು ಬಿ ಅಶ್ವಿನಿ ಅವರು ದಾಳಿ ನಡೆಸಿದರು. ಆಗ, ಅಲ್ಲಿ ಏಳು ಜನ ಜೂಜುಕೋರರು ಸಿಕ್ಕಿಬಿದ್ದರು.
ಬಸ್ತಿ ಕಾಯ್ಕಿಣಿಯ ನಾರಾಯಣ ನಾಯ್ಕ, ಮಾವಳ್ಳಿಯ ಸುಬ್ರಹ್ಮಣ್ಯ ನಾಯ್ಕ, ಮುಂಡಳ್ಳಿಯ ವಿನೋದ ದೇವಾಡಿಗ, ಶಿರಾಲಿ ಗುಮ್ಮನಹಕ್ಕಲದ ಹರೀಶ ಆಚಾರಿ, ತೇರ್ನಮಕ್ಕಿ ಜನತಾ ಕಾಲೋನಿಯ ಮೋಹನ ನಾಯ್ಕ, ಮುರುಡೇಶ್ವರದ ಜಯಂತ ನಾಯ್ಕ ಹಾಗೂ ಮುಂಡಳ್ಳಿಯ ಸಂದೇಶ ದೇವಾಡಿ ವಿರುದ್ಧ ಡಿವೈಎಸ್ಪಿ ಬಿ ಅಶ್ವಿನಿ ಅವರು ಕಾನೂನು ಕ್ರಮ ಜರುಗಿಸಿದರು. ಅವರ ಬಳಿಯಿದ್ದ 25390ರೂ ಹಣವನ್ನು ವಶಕ್ಕೆಪಡೆದು, ಅಲ್ಲಿ ಬಿದ್ದಿದ್ದ ಇಸ್ಪಿಟ್ ಎಲೆಗಳನ್ನು ಅವರು ನ್ಯಾಯಾಲಯಕ್ಕೆ ಒಪ್ಪಿಸಿದರು.