ಉಡುಪಿ ಜಿಲ್ಲೆಯ ಬ್ರಹ್ಮಾವರದಿಂದ ಚಿನ್ನ ಕದ್ದು ಉತ್ತರ ಕನ್ನಡ ಜಿಲ್ಲೆಗೆ ಪ್ರವೇಶಿಸಿದ್ದ ಮೂವರು ಕಳ್ಳರನ್ನು ಯಲ್ಲಾಪುರದ ಸಿದ್ದಿ ಹುಡುಗರು ಸೆದೆ ಬಡಿದಿದ್ದಾರೆ. ಪೊಲೀಸರು ನೀಡಿದ ಮಾಹಿತಿಯಂತೆ ಕಾರ್ಯಾಚರಣೆಗಿಳಿದ ಜನ ಕಳ್ಳರನ್ನು ಹುಟಕಮನೆ ಬಳಿ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಭಾನುವಾರ ಬೆಳಗ್ಗೆ ಉಡುಪಿಯ ಬ್ರಹ್ಮಾವರದಲ್ಲಿ ಮನೆ ಮುಂದೆ ನಿಂತಿದ್ದ ಮಹಿಳೆಯ ಮಾಂಗಲ್ಯವನ್ನು ಮೂವರು ಅಪಹರಿಸಿದ್ದರು. ಐಷಾರಾಮಿ ಕಾರಿನಲ್ಲಿ ಬಂದ ಕಳ್ಳರು 50 ಗ್ರಾಂ ಬಂಗಾರವನ್ನು ದೋಚಿ ಪರಾರಿಯಾಗಿದ್ದರು. ಆ ಮೂವರು ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿದ ಬಗ್ಗೆ ಇಲ್ಲಿನ ಪೊಲೀಸರಿಗೆ ಬ್ರಹ್ಮಾವರ ಪೊಲೀಸರು ಮಾಹಿತಿ ನೀಡಿದ್ದು, ಅದರ ಪ್ರಕಾರ ಜಿಲ್ಲಾ ಪೊಲೀಸರು ಕಾರ್ಯಾಚರಣೆಗಿಳಿದರು.
ಉಡುಪಿ ಕಡೆಯಿಂದ ಬರುತ್ತಿದ್ದ ಎಲ್ಲಾ ವಾಹನಗಳನ್ನು ಪೊಲೀಸರು ತಪಾಸಣೆಗೆ ಒಳಪಡಿಸಿದರು. ಅನುಮಾನಾಸ್ಪದ ಕಾರುಗಳ ಬೆನ್ನು ಬಿದ್ದರು. ಈ ವೇಳೆ ಆ ಕಡೆಯಿಂದ ಬಂದ ಬಿಳಿ ಕಾರಿಗೆ ಪೊಲೀಸರು ಕೈ ಮಾಡಿದರು. ಆದರೆ, ಕಾರಿನ ಒಳಗಿದ್ದವರು ನಿಲ್ಲಿಸಲಿಲ್ಲ. ಹೀಗಾಗಿ ಪೊಲೀಸರು ಅವರನ್ನು ಬೆನ್ನಟ್ಟಿ ಬಂದರು. ಆ ಕಾರು ಯಲ್ಲಾಪುರ ಪ್ರವೇಶಿಸಿದ ನಂತರ ಹುಟಕಮನೆ ರಸ್ತೆ ಕಡೆ ತಿರುಗಿತು. ಪೊಲೀಸರು ಈ ವೇಳೆ `ಜನಸ್ನೇಹಿ ಪೊಲೀಸ್ ಬೀಟ್’ ಎಂಬ ವಾಟ್ಸಪ್ ಗುಂಪನ್ನು ಬಳಸಿಕೊಂಡರು.
ಅನುಮಾನಾಸ್ಪದ ರೀತಿಯಲ್ಲಿ ಬಂದ ಕಾರು ಹಾಗೂ ಅದರೊಳಗಿದ್ದ ಡಕಾಯಿತರ ಬಗ್ಗೆ ಜನರಿಗೆ ಮಾಹಿತಿ ನೀಡಿದರು. `ಅವರು ಎಲ್ಲಿಯೇ ಕಾಣಿಸಿದರೂ ತಿಳಿಸಿ’ ಎಂದು ಮನವಿ ಮಾಡಿದರು. ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿದ್ದ ಕಳ್ಳರು ಹುಡಕಮನೆ ಅರಣ್ಯ ಪ್ರದೇಶಕ್ಕೆ ಕಾರು ನುಗ್ಗಿಸಿದ್ದರು. ರಸ್ತೆ ಅಂಚಿನ ಕಾಲುವೆಯಲ್ಲಿ ಕಾರು ಸಿಕ್ಕಿಬಿದ್ದಿತು. ಅಷ್ಟರೊಳಗೆ ಪೊಲೀಸರ ಸಂದೇಶ ಕೇಳಿಸಿಕೊಂಡಿದ್ದ ಆ ಭಾಗದ ಸಿದ್ದಿ ಹುಡುಗರು ಕಾರಿನಲ್ಲಿದ್ದವರನ್ನು ಅಡ್ಡಗಟ್ಟಿದರು.
ಆ ಮೂವರು ಕಳ್ಳರು ಆಗ ಕಾಡಿಗೆ ಓಡಿದರು. ಆದರೆ, ಊರಿನವರು ಅವರನ್ನು ಬಿಡಲಿಲ್ಲ. ದಿಕ್ಕಾಪಾಲಾಗಿ ಓಡುತ್ತಿದ್ದ ಮೂವರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಯಲ್ಲಾಪುರ ಪಿಐ ರಮೇಶ ಹಾನಾಪುರ, ಪಿಎಸ್‌ಐ ಯಲ್ಲಾಲಿಂಗ ಕನ್ನೂರು, ಎಎಎಸ್‌ಐ ದೀಪಕ ನಾಯ್ಕ, ಪೊಲೀಸ್ ಸಿಬ್ಬಂದಿ ಶಫಿ ಶೇಖ್, ಗಿರೀಶ ಲಮಾಣಿ
ಶೋಭಾ ನಾಯ್ಕ ಹಾಗೂ ಇಮ್ರಾನ್ ಸೇರಿ ಆ ಕಳ್ಳರನ್ನು ಬಂಧಿಸಿದರು.
ಆ ಕಳ್ಳರ ಬಳಿಯಿದ್ದ ದಾಖಲೆ ಪರಿಶೀಲಿಸಿದಾಗ ಮೊಹಿನುದ್ದೀನ್, ಸುಜಿತ್ ಹಾಗೂ ಗೌರೀಶ ಎಂಬ ಗುರುತಿನ ದಾಖಲೆಗಳು ಸಿಕ್ಕವು. ಅವರು ಕದ್ದಿದ್ದ ಚಿನ್ನದ ಸರ ಸಹ ಕಾಣಿಸಿತು. ಅಷ್ಟರೊಳಗೆ ಬ್ರಹ್ಮಾವರ ಪೊಲೀಸರು ಹುಟಕಮನೆಗೆ ಬಂದರು. ಆ ಮೂವರು ಕಳ್ಳರನ್ನು ಉಡುಪಿಗೆ ಕರೆದೊಯ್ದರು. ಪೊಲೀಸರ ಸಹಯೋಗದಲ್ಲಿ ಸಿದ್ದಿ ಹುಡುಗರು ಶೌರ್ಯ ಮೆರೆದಿರುವುದಕ್ಕೆ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಮೆಚ್ಚುಗೆವ್ಯಕ್ತಪಡಿಸಿದರು.