ಚಾರಣಕ್ಕೆ ತೆರಳಿದ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರು ಗೋಕರ್ಣದಲ್ಲಿ ಸಾವನಪ್ಪಿರುವ ಕಾರಣ ಅರಣ್ಯ ಇಲಾಖೆ ಆ ಭಾಗದಲ್ಲಿನ ಚಾರಣಕ್ಕೆ ತಡೆ ಒಡ್ಡಿದೆ. ಜಟಾಯು ತೀರ್ಥಕ್ಕೆ ತೆರಳುವ ಮಾರ್ಗಕ್ಕೆ ಅಡ್ಡಲಾಗಿ ಸದ್ಯ ಬೇಲಿ ನಿರ್ಮಿಸಲಾಗಿದೆ.
ಈಚೆಗೆ ಗೋಕರ್ಣಕ್ಕೆ ಬರುವ ಪ್ರವಾಸಿಗರನ್ನು ಕೆಲವರು ಈ ಮಾರ್ಗದಲ್ಲಿ ಚಾರಣಕ್ಕೆ ಕರೆದೊಯ್ಯುತ್ತಿದ್ದರು. ಇಲ್ಲಿನ ಕುಡ್ಲೆ ಹಾಗೂ ಓಂ ಕಡಲತೀರದ ಚಾರಣ ಪ್ರವಾಸಿಗರ ನೆಚ್ಚಿನ ಆಯ್ಕೆಯಾಗಿತ್ತು. ಸಮುದ್ರದಂಚಿನ ಪರ್ವತದದ ಬಳಿ ಕಡಿದಾದ ಮಾರ್ಗವಿದ್ದರೂ ಪ್ರವಾಸಿಗರು ಅಲ್ಲಿ ಅಪಾಯಕಾರಿ ರೀತಿಯಲ್ಲಿ ಸಾಗುತ್ತಿದ್ದರು. ಗುರುವಾರ ಚಾರಣಕ್ಕೆ ಬಂದಿದ್ದ ವಿದ್ಯಾರ್ಥಿನಿಯರಿಬ್ಬರು ಇಲ್ಲಿ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದರು.
ಹೀಗಾಗಿ ಪ್ರವಾಸಿಗರ ಪ್ರಾಣ ಉಳಿಸುವುದಕ್ಕಾಗಿ ಗೋಕರ್ಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಶನಿವಾರ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಭಾನುವಾರ ಅಲ್ಲಿ ಮುಳ್ಳು ತಂತಿಯ ಬೇಲಿ ನಿರ್ಮಿಸಿದ್ದಾರೆ. ಜೊತೆಗೆ ಆ ಭಾಗಕ್ಕೆ ತೆರಳದಂತೆ ಸೂಚನಾ ಫಲಕವನ್ನು ಅಳವಡಿಸಿದ್ದಾರೆ. ನಿಯಮ ಮೀರಿಯೂ ಅಲ್ಲಿ ತೆರಳಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ಅರಣ್ಯ ರಕ್ಷಕ ಪ್ರಶಾಂತ ಗೌಡ, ಕಾವಲುಗಾರ ವೆಂಕಟ್ರಮಣ ಅಗೇರ ಹಾಗೂ ಹೊನ್ನಪ್ಪ ಪಟಗಾರ ಸೇರಿ ಈ ದಿನ ಬೇಲಿ ನಿರ್ಮಿಸಿದ್ದಾರೆ.