ಹೊಟ್ಟೆನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅಂಕೋಲಾದ ನಾಗಪ್ಪ ಗೌಡ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಗೆ ಯಾಮಾರಿಸಿ ಪರಾರಿಯಾಗಿದ್ದಾರೆ. ಗೌಡರ ಕುಟುಂಬದವರು ಇದೀಗ ಅವರ ಹುಡುಕಾಟ ನಡೆಸಿದ್ದಾರೆ.
ಅಂಕೋಲಾದ ಅಲಗೇರಿ ಬಳಿಯ ಬಡಗೇರಿಯಲ್ಲಿ ನಾಗಪ್ಪ ಗೌಡ (41) ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಮದ್ಯ ವ್ಯಸನ ಚಟಕ್ಕೆ ಅಂಟಿಕೊAಡಿದ್ದರು. ಹೊಟ್ಟೆನೋವು ಕಾಣಿಸಿಕೊಂಡಿದ್ದರಿoದ ಅವರ ತಂದೆ ಬೀರಾ ಗೌಡ ಅವರು ನಾಗಪ್ಪ ಗೌಡರನ್ನು ಹೊನ್ನಾವರದ ಆಸ್ಪತ್ರೆಗೆ ಕರೆತಂದಿದ್ದರು.
ಏಪ್ರಿಲ್ 26ರಂದು ಹೊನ್ನಾವರದ ಸೆಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದ ನಾಗಪ್ಪ ಗೌಡ ಅವರು ಉಪಾಯವಾಗಿ ಅಲ್ಲಿಂದ ತಪ್ಪಿಸಿಕೊಂಡರು. ಎಲ್ಲಿ ಹುಡುಕಿದರೂ ನಾಗಪ್ಪ ಗೌಡ ಅವರು ಸಿಗಲಿಲ್ಲ. ಆಸ್ಪತ್ರೆ ಸಿಬ್ಬಂದಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಸಂಜೆ 4.30ರ ವೇಳೆಗೆ ಅವರು ಆಸ್ಪತ್ರೆಯಿಂದ ಹೊರಹೋಗಿದ್ದು ಗಮನಕ್ಕೆ ಬಂದಿದ್ದು, ಎಲ್ಲಿ ಹೋದರು? ಎಂದು ಯಾರಿಗೂ ಗೊತ್ತಾಗಲಿಲ್ಲ. ಅಂಕೋಲಾದ ಮನೆಗೆ ಸಹ ನಾಗಪ್ಪ ಗೌಡರು ಮರಳಲಿಲ್ಲ. ಹೀಗಾಗಿ ಬೀರಾ ಗೌಡ ಅವರು ಹೊನ್ನಾವರ ಪೊಲೀಸ್ ಠಾಣೆಗೆ ತೆರಳಿ ಮಗ ಕಾಣೆಯಾದ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ಸಹ ನಾಗಪ್ಪ ಗೌಡರ ಹುಡುಕಾಟ ನಡೆಸಿದ್ದಾರೆ.
ಅನಾರೋಗ್ಯ: ಬಾವಿಗೆ ಹಾರಿ ಜೀವಬಿಟ್ಟ ಕಾರ್ಮಿಕ
ಯಲ್ಲಾಪುರದ ಕಂಪ್ಲಿ ಬಳಿಯ ಸಂತೋಷ ನಾಯ್ಕ ಅವರು ಅದೇ ಊರಿನ ನಾರಾಯಣ ಹೆಗಡೆ ಅವರ ಒಡೆತನದ ಬಾವಿಯಲ್ಲಿ ಬಿದ್ದು ಸಾವನಪ್ಪಿದ್ದಾರೆ.
ಕಂಪ್ಲಿ ಬೂಮಸರದಲ್ಲಿ ಸಂತೋಷ ನಾಯ್ಕ (39) ಅವರು ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದರು. ಅವರ ಪತ್ನಿ ವಿದ್ಯಾ ನಾಯ್ಕ ಅವರು ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಕುಟುಂಬ ನಡೆಸುತ್ತಿದ್ದರು. ಈ ನಡುವೆ ಸಂತೋಷ ನಾಯ್ಕ ಅವರಿಗೆ ಅನಾರೋಗ್ಯ ಕಾಡಿತು. ವಿವಿಧ ಆಸ್ಪತ್ರೆಗೆ ತೆರಳಿ ಚಿಕಿತ್ಸೆಪಡೆದರೂ ಅವರು ಗುಣಮುಖರಾಗಲಿಲ್ಲ.
ಮೂರು ತಿಂಗಳ ಕಾಲ ನಿರಂತರ ಚಿಕಿತ್ಸೆಪಡೆದರೂ ರೋಗವಾಸಿಯಾಗದ ಕಾರಣ ಸಂತೋಷ ನಾಯ್ಕ ಅವರು ಬೇಸರಿಸಿಕೊಂಡಿದ್ದರು. ಇದೇ ವಿಷಯವಾಗಿ ಚಿಂತಿಸುತ್ತಿದ್ದ ಅವರು ಮಾನಸಿವಾಗಿ ಕುಗ್ಗಿದ್ದು, ಖಿನ್ನತೆಗೆ ಒಳಗಾದರು. ಏಪ್ರಿಲ್ 27ರಂದು ನಾರಾಯಣ ಹೆಗಡೆ ಅವರ ಮನೆ ಬಳಿ ತೆರಳಿದ ಸಂತೋಷ ನಾಯ್ಕರು ಅಲ್ಲಿದ್ದ ಬಾವಿಗೆ ಹಾರಿ ಸಾವನಪ್ಪಿದರು. ಸಂಜೆ ವೇಳೆ ಅವರ ಶವ ನೋಡಿದ ಊರಿನವರು ಅದನ್ನು ಮೇಲೆತ್ತಿದರು. ಘಟನಾವಳಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ವಿದ್ಯಾ ನಾಯ್ಕ ಅವರು ಪ್ರಕರಣ ದಾಖಲಿಸಿದರು.
ಜಾನುವಾರು ಮೇವು ನೀಡಲು ಹೋದವ ಉಪವಾಸ: ಸಾವು!
ಕೊಟ್ಟಿಗೆಯಲ್ಲಿದ್ದ ಜಾನುವಾರುಗಳಿಗೆ ಮೇವುಣಿಸಲು ತೆರಳಿದ್ದ ಹಳಿಯಾಳದ ಸಾವೇರ ಸಿದ್ದಿ ಅವರು ಅಲ್ಲಿಯೇ ಸಾವನಪ್ಪಿದ್ದಾರೆ.
ಹಳಿಯಾಳದ ಹೊಸೂರು ಬಳಿಯ ಜತಗಾದಲ್ಲಿ ಸಾವೇರ್ ಸಿದ್ದಿ (75) ವಾಸವಾಗಿದ್ದರು. ಏಪ್ರಿಲ್ 26ರಂದು ಸಂಜೆ ಅವರು ದನಗಳಿಗೆ ಮೇವು ಹಾಕಲು ಕೊಟ್ಟಿಗೆಗೆ ಹೋಗಿದ್ದರು. ಆ ದಿನ ಬೆಳಗ್ಗೆಯಿಂದ ಅವರು ಆಹಾರ ಸೇವಿಸಿರಲಿಲ್ಲ. ಬದಲಾಗಿ, ಮದ್ಯ ಸೇವನೆ ಮಾಡಿದ್ದು ಅದೇ ಗುಂಗಿನಲ್ಲಿದ್ದರು. ಏಪ್ರಿಲ್ 27ರ ಮರುದಿನ ನೋಡಿದಾಗ ಕೊಟ್ಟಿಗೆಯಲ್ಲಿನ ಮಂಚದ ಮೇಲೆ ಸಾವೇರ ಸಿದ್ದಿ ಶವವಾಗಿದ್ದರು. ಈ ಬಗ್ಗೆ ಅವರ ಮಗ ಮಿಂಗಲ್ ಸಿದ್ದಿ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.
ದಟ್ಟ ಕಾಡಿನಲ್ಲಿ ಕೋಳಿ ಅಂಕ: 13 ಬೈಕ್ ವಶ
ಶಿರಸಿ ಕಾಗೇರಿ ಬೆಟ್ಟಕೊಪ್ಪದ ಭೂತೇಶ್ವರ ದೇವಾಲಯ ಹಿಂದಿನ ಕಾಡಿನಲ್ಲಿ ಕೋಳಿ ಅಂಕನಡೆಸುತ್ತಿದ್ದ ಕಾನಗೋಡಿನ ಗಣೇಶ ನಾಯ್ಕ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಅಲ್ಲಿದ ಹಲವು ಜನ ದಿಕ್ಕಾಪಾಲಾಗಿ ಓಡಿ ತಪ್ಪಿಸಿಕೊಂಡಿದ್ದಾರೆ. ಆದರೆ, ಪೊಲೀಸರು ಅವರ ಬೈಕುಗಳನ್ನು ವಶಕ್ಕೆಪಡೆದಿದ್ದಾರೆ.
ಏಪ್ರಿಲ್ 27ರಂದು ಮಧ್ಯಾಹ್ನ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಶಿರಸಿ ಗ್ರಾಮೀಣ ಠಾಣೆ ಪಿಎಸ್‌ಐ ಸಂತೋಷಕುಮಾರ ಎಂ ಅವರಿಗೆ ಮಾಹಿತಿ ಸಿಕ್ಕಿತು. ಈ ಹಿನ್ನಲೆ ಅವರು ತಮ್ಮ ತಂಡದೊoದಿಗೆ ಭೂತೇಶ್ವರ ದೇವಾಲಯ ಹಿಂದಿನ ಅರಣ್ಯ ಪ್ರದೇಶಕ್ಕೆ ತೆರಳಿದರು. ಅಲ್ಲಿ ಕೆಲ ಬೈಕುಗಳು ನಿಂತಿದ್ದವು. ಗಣೇಶ ನಾಯ್ಕ ಅವರು ಕೋಳಿಗಳನ್ನು ಹಿಡಿದು ಜೂಜಾಡಿಸುತ್ತಿದ್ದರು. ಪೊಲೀಸರನ್ನು ಕಂಡ ಉಳಿದವರು ಓಡಿ ಪರಾರಿಯಾದರು. ಅದಾಗಿಯೂ ಪೊಲೀಸರು ಜೂಜಾಟಕ್ಕೆ ಬಳಿಸಿದ್ದ 5920ರೂ ಹಣ ಹಾಗೂ 13 ಬೈಕುಗಳನ್ನು ವಶಕ್ಕೆಪಡೆದರು. ಗಣೇಶ ನಾಯ್ಕ ಅವರ ಬಳಿಯಿಂದ ಹುಂಜವನ್ನು ಪೊಲೀಸರು ಜಪ್ತು ಮಾಡಿದರು.