ಧರ್ಮಸ್ಥಳದ ಮೇಲೆ ಬಂದಿರುವ ಆರೋಪಗಳ ತನಿಖೆಗೆ ಯಾರ ಆಕ್ಷೇಪಣೆಯೂ ಇಲ್ಲ. ಆದರೆ, ತನಿಖೆಯ ಹೆಸರಿನಲ್ಲಿ ಹಿಂದು ಧರ್ಮದ ಮೇಲೆ, ಧರ್ಮಸ್ಥಳದ ಮೇಲೆ, ಮಂಜುನಾಥ ಸ್ವಾಮಿಯ ಮೇಲೆ ರಾಷ್ಟ್ರ,ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಈ ಅಪಪ್ರಚಾರದ ಖಂಡನೀಯ ಎಂದು ಬಿಜೆಪಿ ಮುಖಂಡ ಹಾಗೂ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ.
ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದ್ದ ರಾಜ್ಯ ಸರಕಾರ ಅದಕ್ಕೆ ಸೂಕ್ತ ನಿರ್ದೇಶನ ನೀಡದೇ ಇಡೀ ಪ್ರಕರಣವನ್ನು ಗೊಂದಲದಲ್ಲಿ ಕೆಡವಿದೆ. ಅನಾಮಿಕ ಹೇಳಿದಂತೆ ಧರ್ಮಸ್ಥಳದ ಸುತ್ತ ಕಂಡಕಂಡಲ್ಲಿ ಭೂಮಿ ಅಗೆಯುವ ಪೂರ್ವದಲ್ಲಿ, ಈ ಅನಾಮಿಕ ಮುಸುಕುಧಾರಿಯ ಬಗ್ಗೆ ಸರಿಯಾಗಿ ತನಿಖೆ ಮಾಡಬೇಕಿತ್ತು. ಆತ ಹೊತ್ತು ತಂದ ತಲೆಬುರುಡೆ ಯಾರು ತೆಗೆದಿದ್ದು?, ಎಲ್ಲಿಂದ ತೆಗೆದಿದ್ದು? ಎನ್ನುವ ಪರಿಶೀಲನೆ ಆಗಬೇಕಿತ್ತು. ಅರ್ಧ ಸತ್ಯ ಆಗಲೇ ಹೊರಗೆ ಬರುತ್ತಿತ್ತು.
ಈಗ ಧರ್ಮಸ್ಥಳದ ಮಾನವನ್ನು ಸಂಪೂರ್ಣ ಬೀದಿಗೆ ತಂದ ನಂತರ, ಅನಾಮಿಕ ತೋರಿಸಿದ ಯಾವ ಸ್ಥಳದಲ್ಲೂ ಕುರುಹುಗಳು ಸಿಗದೇ ಇದ್ದಾಗ, ಇಲ್ಲಿಯವರೆಗೂ ತಾಳ್ಮೆಯಿಂದ ತಡೆದುಕೊಂಡಿದ್ದ ಮಂಜುನಾಥ ಸ್ವಾಮಿಯ ಭಕ್ತರು, ಸಹನೆಯ ಕಟ್ಟೆ ಒಡೆದು ಬೀದಿಗೆ ಇಳಿದಾಗ ಸರಕಾರಕ್ಕೆ ಜ್ಞಾನೋದಯ ಆಗುತ್ತಿದೆ. ಮುಸುಕುಧಾರಿಯ ಬಗ್ಗೆ ಅನುಮಾನ ಬರಲು ಆರಂಭವಾಗಿದೆ. ಷಡ್ಯಂತ್ರದ ಹಿಂದಿರುವ ಜಾಲವನ್ನು ಬೇಧಿಸುವ ಹೇಳಿಕೆಗಳು ಹೊರಗೆ ಬರುತ್ತಿವೆ. ಇದೇ ಅನುಮಾನದ ಬುದ್ದಿ ಮೊದಲೇ ಕಾಣಿಸಿದ್ದಿದ್ದರೆ, ಧರ್ಮಸ್ಥಳದ ಮಾನ ಹರಾಜು ಆಗುತ್ತಿತ್ತೇ? ಎಂದು ಪ್ರಶ್ನಿಸಿದ್ದಾರೆ.
ಮಾಡುವುದೆಲ್ಲ ಮಾಡಿ ಈಗ ‘ ಧರ್ಮಸ್ಥಳದ ಹೆಸರಿಗೆ ಕಳಂಕ ತರಲು ಬಿಡುವುದಿಲ್ಲ’ ಎನ್ನುತ್ತಿದ್ದಾರೆ. ಬಿಡಲು ಏನು ಬಾಕಿ ಇಟ್ಟಿದ್ದೀರಿ?. ತಮ್ಮ ವಯಕ್ತಿಕ ದ್ವೇಷ ಹಾಗೂ ರಾಜಕೀಯ ಹಿತಾಸಕ್ತಿಗಾಗಿ ಒಂದು ‘ಧರ್ಮ’ಸ್ಥಳವನ್ನೇ ಟಾರ್ಗೆಟ್ ಮಾಡಿ ಮಾನ ಕಳೆದಿರುವ ಈ ಕಿರಾತಕರನ್ನು ಒಂದು ವೇಳೆ ಧರ್ಮಸ್ಥಳದ ಶಾಂತಮೂರ್ತಿ ಧರ್ಮಾಧಿಕಾರಿಯೂ ಕ್ಷಮಿಸಬಹುದು. ಆದರೆ, ಆ ದೈವ ಮಂಜುನಾಥಸ್ವಾಮಿ ಸುಮ್ಮನೆ ಬಿಡಲಾರ, ಸಂದರ್ಭ ಬಂದಾಗ ಸೂಕ್ತ ಪಾಠ ಕಲಿಸುತ್ತಾನೆ ಎಂದಿದ್ದಾರೆ.