ಗಂಡನಿಗೆ ನಿದ್ರೆ ಮಾತ್ರೆ ತಿನ್ನಿಸಿ ಕೊಲೆ ಮಾಡಿದ ಪತ್ನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಭಟ್ಕಳದ ಅಬ್ದುಲ್ ನಾಸಿರ್ ಕೊಲೆ ಪ್ರಕರಣದಲ್ಲಿ ಅವರ ಪತ್ನಿ ರೇಷ್ಮಾ ಖಾನಮ್ ಕೈವಾಡವಿರುವುದು ದೃಢವಾಗಿದೆ.
2017ರ ಫೆ 17ರಂದು ರೇಶ್ಮಾ ಖಾನಮ್ ಹಾಗೂ ಅವರ ಪತಿ ಅಬ್ದುಲ್ ನಾಸಿರ್ ನಡುವೆ ಜಗಳವಾಗಿತ್ತು. ಪತಿಗೆ ನಿದ್ರೆ ಮಾತ್ರೆ ತಿನಿಸಿದ ರೇಶ್ಮಾ ಖಾನಮ್ ವೇಲಿನಿಂದ ಕತ್ತು ಹಿಸುಕಿ ಅಬ್ದುಲ್ ನಾಸಿರ್ ಅವರ ಕೊಲೆ ಮಾಡಿದ್ದರು. ಅದಾದ ನಂತರ ಅಬ್ದುಲ್ ನಾಸಿರ್ ಮಲಗಿದಲ್ಲಿಯೇ ಸಹಜವಾಗಿ ಸಾವನಪ್ಪಿರುವ ಕಥೆ ಕಟ್ಟಿದ್ದರು. ಸಾಕ್ಷಿ ನಾಶಕ್ಕಾಗಿ ವೇಲ್’ನ್ನು ವಾಶಿಂಗ್ ಮಿಷನ್ ಒಳಗೆ ಹಾಕಿ ತೊಳೆದಿದ್ದರು.
ಇನ್ನೂ ರೇಷ್ಮಾಗೆ ಮಾದಕ ದ್ರವ್ಯ ನೀಡಿ ಅಬ್ದುಲ್ ನಾಸಿರ್ ಎರಡನೇ ಮದುವೆ ಆದ ಆರೋಪವೂ ಇತ್ತು. ಇದೇ ವಿಷಯವಾಗಿ ಅವರಿಬ್ಬರ ನಡುವೆ ವೈಮನಸ್ಸಿತ್ತು. ಹೀಗಾಗಿ ಪದೇ ಪದೇ ಜಗಳಗಳು ನಡೆಯುತ್ತಿದ್ದವು. ಕೊಲೆ ಮಾಡಿದ ನಂತರ ಗಂಡ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾನೆ ಎಂದು ರೇಷ್ಮಾ ಹೇಳಿದ್ದಳು. ಆದರೆ, ಮೃತನ ಸಹೋದರನ ಪುತ್ರ ಶಂಕೆ ವ್ಯಕ್ತಪಡಿಸಿ ಪೊಲೀಸ್ ದೂರು ನೀಡಿದ್ದರು.
ಸಂಪೂರ್ಣ ತನಿಖೆ ಮತ್ತು ವಿಚಾರಣೆಯ ನಂತರ, ನ್ಯಾಯಾಲಯವು ರೇಷ್ಮಾ ಅವರ ಅಪರಾಧ ಸಾಭೀತಾಗಿದೆ. ಕೊಲೆ ಮಾಡಿದ ಕಾರಣ ಜೀವಾವಧಿ ಶಿಕ್ಷೆ ಮತ್ತು 5000 ರೂ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ಅವರು ವಾದ ಮಂಡಿಸಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.