ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ಅಡುಗೆ ಅನಿಲ ಹೊತ್ತು ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಲಾರಿಗೆ ಗುದ್ದಿದೆ. ಟ್ಯಾಂಕರ್ ಚಾಲಕನಿಗೆ ಹೃದಯಘಾತವಾಗಿರುವುದೇ ಅಪಘಾತಕ್ಕೆ ಕಾರಣ.
ಸೋಮವಾರ ತಮಿಳುನಾಡು ಮೂಲದ ಲಾರಿ ಗ್ಯಾಸ್ ತುಂಬಿಕೊoಡು ಸಾಗುತ್ತಿದ್ದು, ಅದರ ಚಾಲಕ ಹಠಾತ್ ಆಗಿ ಎದೆನೋವಿನಿಂದ ಬಳಲಿದರು. ಅವರನ್ನು ರಕ್ಷಿಸುವುದರೊಳಗೆ ಚಾಲಕ ವಾಹನದಲ್ಲಿಯೇ ಸಾವನಪ್ಪಿದರು. ಅವರ ಸಾವಿನ ನಂತರ ಟ್ಯಾಂಕರ್ ಅಡ್ಡಾದಿಡ್ಡಿ ಚಲಿಸಲು ಶುರು ಮಾಡಿತು. ಪರಿಣಾಮ ಇನ್ನೊಂದು ಲಾರಿಗೆ ಆ ಟ್ಯಾಂಕರ್ ಗುದ್ದಿತು.
ಈ ಅಪಘಾತದಿಂದ 1 ತಾಸು ವಾಹನ ದಟ್ಟಣೆ ಹೆಚ್ಚಾಯಿತು. ಪೊಲೀಸರು ಆಗಮಿಸಿ ಇನ್ನಿತರ ವಾಹನಗಳಿಗೆ ಸಮಸ್ಯೆಯಾಗದಂತೆ ಮುನ್ನಚ್ಚರಿಕೆವಹಿಸಿದರು. ಸಾವನಪ್ಪಿದ ಚಾಲಕನ ಶವವನ್ನು ಆಸ್ಪತ್ರೆಗೆ ತರಲಾಯಿತು. ಅಪಘಾತದಲ್ಲಿ ಎರಡು ವಾಹನಗಳು ಅಲ್ಲಲ್ಲಿ ಜಖಂ ಆಗಿದೆ. ಕ್ರೇನ್ ಬಳಸಿ ಆ ವಾಹನವನ್ನು ರಸ್ತೆ ಬದಿಗೆ ಸರಿಸಲಾಗಿದ್ದು, ಸದ್ಯ ಇತರೆ ವಾಹನ ಓಡಾಟಕ್ಕೆ ಸಮಸ್ಯೆ ಇಲ್ಲ.
ಗ್ಯಾಸ್ ತುಂಬಿದ ವಾಹನ ಅಪಘಾತವಾಗಿದ್ದರಿಂದ ಜನರು ಆಘಾತಕ್ಕೆ ಒಳಗಾಗಿದ್ದರು. ಗ್ಯಾಸ್ ಸೋರಿಕೆ ಆಗಿಲ್ಲ ಎಂಬುದನ್ನು ಅರಿತು ನಿರಾಳರಾದರು.