ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಉಪಳೇಶ್ವರ, ಜಂಬೆಸಾಲ, ಹುತ್ಕಂಡ ಕ್ರಾಸ್, ಮಳಲಗಾಂವ ಭಾಗದ ವಿದ್ಯಾರ್ಥಿಗಳಿಗೆ ಅಗತ್ಯ ಸಮಯಕ್ಕೆ ಬಸ್ ಇಲ್ಲದೇ ಶಾಲೆ, ಕಾಲೇಜಿಗೆ ಸರಿಯಾದ ಸಮಯಕ್ಕೆ ತಲುಪಲು ತೊಂದರೆ ಉಂಟಾಗುತ್ತಿದೆ.
ಯಲ್ಲಾಪುರದಿಂದ ಶಿರಸಿಗೆ ಬೇಕಾದಷ್ಟು ಬಸ್ ಗಳಿದ್ದರೂ, ವಿದ್ಯಾರ್ಥಿಗಳು ಶಾಲೆ ಕಾಲೇಜಿಗೆ ಹೋಗುವ ಮತ್ತು ಮರಳಿ ಬರುವ ಸಮಯಕ್ಕೆ ಬಸ್ ಇಲ್ಲದೇ ಇರುವುದು ಸಮಸ್ಯೆಯಾಗುತ್ತಿದೆ.
ಬೆಳಿಗ್ಗೆ ತರಗತಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಸಂಜೆಯೂ ಮನೆಗೆ ತಲುಪುವುದು ತಡವಾಗುತ್ತಿದೆ. ಇದೇ ಕಾರಣಕ್ಕಾಗಿ ಕೆಲವರು ಸಿಕ್ಕ ವಾಹನಗಳನ್ನು ಹತ್ತಿ ಹೋಗುತ್ತಿದ್ದು, ಏನಾದರೂ ಅಪಾಯ ಉಂಟಾದರೆ ಯಾರು ಹೊಣೆ ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ.
ಜುಲೈ 15 ರ ಒಳಗೆ ಈ ಸಮಸ್ಯೆ ಬಗೆಹರಿಯಬೇಕು. ಬೆಳಿಗ್ಗೆ ಹಾಗೂ ಸಂಜೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಓಡಾಟ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಚಂದಗುಳಿಯ ಬಿಜೆಪಿ ಘಟಕದಿಂದ ಬಸ್ ಘಟಕದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಒಂದು ವೇಳೆ ಸಮಸ್ಯೆ ಬಗೆಹರಿಯದಿದ್ದರೆ ಜು.19 ರಂದು ಬೆಳಗ್ಗೆ ಉಪಳೇಶ್ವರದಲ್ಲಿ ರಸ್ತೆ ತಡೆ ನಡೆಸುವುದಾಗಿ ಬಿಜೆಪಿ ಪ್ರಮುಖರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಚಂದಗುಳಿ ಬಿಜೆಪಿ ಘಟಕದ ನಾಗರಾಜ ಕವಡಿಕೆರೆ, ಸುಬ್ರಹ್ಮಣ್ಯ ಭಟ್ಟ ಉದ್ದಾಬೈಲ, ಅಪ್ಪು ಆಚಾರಿ, ರಾಘವೇಂದ್ರ ಕಬ್ಬಿನಗದ್ದೆ ಇತರರಿದ್ದರು.