ಯಲ್ಲಾಪುರ: ಶಾಸಕ ಶಿವರಾಮ ಹೆಬ್ಬಾರ್ ಅವರ ಪುತ್ರ ವಿವೇಕ್ ಹೆಬ್ಬಾರ್ ಅವರು ಕೆಪಿಸಿಸಿ ಸದಸ್ಯರಾಗಿದ್ದರೂ ಅವರ ಬೆಂಬಲಿಗರಿಗೆ ಹಾಗೂ ಮೂಲ ಕಾಂಗ್ರೆಸಿಗರಿಗೆ ಪಕ್ಷದಲ್ಲಿ`ಶಕ್ತಿ’ ಸಿಕ್ಕಿಲ್ಲ.
ಇದರ ಪರಿಣಾಮವಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಬಹುದೂರ ಸಾಗಿದ್ದು, ಅದನ್ನು ಸರಿಪಡಿಸುವ ಕಾರ್ಯ ಇನ್ನೂ ನಡೆದಿಲ್ಲ. ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಬೆಂಬಲಿಸಿದರೂ ಅವರ ಅಭಿಮಾನಿಗಳು ಸುದ್ದಿಗೋಷ್ಠಿಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಮುಂದಿನ ಚುನಾವಣೆಗಾಗಿ ಈಗಿಂದಲೇ ಪಕ್ಷ ಸಂಘಟಿಸುವ ಕಾರ್ಯದಲ್ಲಿ ಯಾರೂ ತೊಡಗಿಲ್ಲ. ಹೀಗಾಗಿ ಪಕ್ಷದ ತಳಮಟ್ಟದ ಕಾರ್ಯಕರ್ತರಲ್ಲಿ ಪಕ್ಷದ ಉಳಿವಿನ ಬಗ್ಗೆ ಪ್ರಶ್ನೆ ಎದುರಾಗಿದೆ. ಮೂಲ ಕಾಂಗ್ರೆಸಿಗರಿಗೆ ಪಕ್ಷದಲ್ಲಿ ಮನ್ನಣೆ ನೀಡಬೇಕು ಎಂಬ ಕೂಗು ಮುನ್ನೆಲೆಗೆ ಬಂದಿದೆ.
`ರಾಜಕೀಯವಾಗಿ ಸಕ್ರೀಯವಾಗಿದ್ದು, ಮೊದಲಿನಿಂದಲೂ ಪಕ್ಷ ಸಂಘಟನೆಯಲ್ಲಿ ತೊಡಗಿದ್ದವರನ್ನು ಗುರುತಿಸಿ ಅವರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಇನ್ನಿತರ ಪದಾಧಿಕಾರಿ ಹುದ್ದೆಗಳನ್ನು ನೀಡಿದಲ್ಲಿ ಮಾತ್ರ ಕಾಂಗ್ರೆಸ್ ಪುನಶ್ಚೇತನ ಸಾಧ್ಯ. ಇಲ್ಲವಾದಲ್ಲಿ ನಾವೂ ಬದುಕುವುದಕ್ಕಾಗಿ ತಟಸ್ಥರಾಗುವುದು ಅನಿವಾರ್ಯವಾದೀತು’ ಎಂದು ಬೈಕ್ ರಿಪೇರಿಗೆ ಬಂದಿದ್ದ ಕಾಂಗ್ರೆಸ್ಸಿಗರೊಬ್ಬರು ಆತಂಕದಲ್ಲಿ ಮಾತನಾಡುತ್ತಿದ್ದರು.
`ಸಂಘಟನೆ, ಪ್ರಚಾರ ಹಾಗೂ ನಾಯಕತ್ವದ ವಿಷಯದಲ್ಲಿ ತಾಲೂಕಾ ಬಿಜೆಪಿ ಮುನ್ನಡೆ ಸಾಧಿಸಿದ್ದು, ಯುವ ನಾಯಕರಿಗೆ ಅಧಿಕಾರ ನೀಡಿರುವುದೇ ಇದಕ್ಕೆ ಕಾರಣ. ಕಾಂಗ್ರೆಸ್ಸಿಗೂ ಸಹ ಯುವ ನಾಯಕತ್ವದ ಅಗತ್ಯವಿದೆ’ ಎಂಬುದು ಕರ್ಣಾಟಕ ಬ್ಯಾಂಕ್ ಹೊರಗೆ ನಿಂತು ಚರ್ಚಿಸುವವರ ಮನದಾಳ. `ವಿವೇಕ್ ಹೆಬ್ಬಾರ್ ಅವರಿಗೆ ಕೆಪಿಸಿಸಿ ಹುದ್ದೆ ನೀಡಿರುವುದರಿಂದ ಕಾಂಗ್ರೆಸ್ಸಿಗೆ ನಾಯಕತ್ವದ ಜೊತೆ ಆರ್ಥಿಕ ಶಕ್ತಿ ಬಂದಿದೆ. ಅವರು ಕಾಂಗ್ರೆಸ್ ಬೆಂಬಲಕ್ಕೆ ಬಾರದಿದ್ದರೆ ಲೋಕಸಭೆಯಲ್ಲಿ ಇಷ್ಟು ಮತಗಳು ಸಹ ಬರುತ್ತಿರಲಿಲ್ಲ. ಪ್ರಸ್ತುತ ಅವರ ಜೊತೆ ಪಕ್ಷಕ್ಕಾಗಿ ದುಡಿಯಲು `ಯುವಪಡೆ’ಯ ಅಗತ್ಯವಿದ್ದು, ಸ್ಥಳೀಯವಾಗಿ ಸಂಘಟನೆ ಮಾಡಬಲ್ಲ ಯೋಗ್ಯರನ್ನು ಹುಡುಕಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ಬಿಜೆಪಿಗೆ ಸರಿಸಮವಾಗಿ ಕಾಂಗ್ರೆಸ್ ಪೈಪೋಟಿ ನೀಡಲು ಸಾಧ್ಯ’ ಪ್ರಯಾಣಿಕರ ರಿಕ್ಷಾ ಓಡಿಸುವ ಹೆಬ್ಬಾರ್ ಅಭಿಮಾನಿಯೊಬ್ಬರು ಹೇಳುತ್ತಾರೆ. `ಯುವಕರ ಜೊತೆ ಮೂಲ ಕಾಂಗ್ರೆಸ್ಸಿಗರಿಗೆ ಪಕ್ಷದಲ್ಲಿ ಅವಕಾಶ ಇಲ್ಲ. ಇದೇ ಪಕ್ಷದ ಹಿನ್ನಡೆಗೆ ಕಾರಣ’ ಎಂದು ಪ್ರಯಾಣಿಕರು ಮಾತನಾಡುವುದನ್ನು ಕೇಳಿಸಿಕೊಂಡ ಚಾಲಕರೊಬ್ಬರು ತಮ್ಮ ಅನುಭವ ಬಿಚ್ಚಿಟ್ಟರು.
`ನಾಯಕತ್ವ ಬದಲಾವಣೆ ಆಗದೇ ಇದ್ದಲ್ಲಿ ಮುಂದಿನ ಜಿಲ್ಲಾ ಪಂಚಾಯತ ಹಾಗೂ ತಾಲೂಕಾ ಪಂಚಾಯತ ಚುನಾವಣೆ ಸಹ ಲೋಕಸಭೆ ಫಲಿತಾಂಶದ ಹಾದಿ ಹಿಡಿಯಲಿದೆ. ಅತ್ಯಧಿಕ ಪ್ರಾಬಲ್ಯವಿರುವ ಸಮುದಾಯದ ಹಾಗೂ ಹಳಬರು ಹಾಗೂ ಹೊಸಬರನ್ನು ಒಗ್ಗೂಡಿಸಿಕೊಂಡು ಪಕ್ಷಕ್ಕಾಗಿ ದುಡಿಯುವ ಯುವ ನಾಯಕರ ಶ್ರಮಕ್ಕೆ ಕಾಂಗ್ರೆಸ್ ಬೆಲೆಕೊಡಬೇಕು’ ಎಂಬ ಮಾತು ಹೋಟೆಲ್ ಉದ್ದಿಮೆಯಲ್ಲಿ ತೊಡಗಿಕೊಂಡ ಯುವ ಮತದಾರನದ್ದು.
Discussion about this post