`ಸಂಗೀತ ಎಂದರೆ ಸಾಧನೆ. ಅದು ಒಂದು ತಪಸ್ಸು’ ಎಂದು ತಿಳಿದಿರುವ ಅಂಕೋಲೆಯ ಮೇಘನಾ ಆಗೇರ್ `ಸ ರಿ ಗ ಮ ಪ’ ಕಾರ್ಯಕ್ರಮಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ತಮ್ಮ ಅದ್ಭುತ ಕಂಠಸಿರಿಯಿoದ ಇಲ್ಲಿನವರ ಮನಗೆದ್ದ ಮೇಘನಾ ಸಂಗೀತದ ಜೊತೆ ಇತರೆ ಚಟುವಟಿಕೆಗಳನ್ನು ಮೈಗೂಡಿಸಿಕೊಂಡು ಕಲಾ ರಾಯಭಾರಿಯಾಗಿ ಗುರುತಿಸಿಕೊಂಡಿದ್ದಾರೆ. ಅಂಕೋಲೆಯ ಸಾಂಸ್ಕೃತಿಯ ಲೋಕದಲ್ಲಿ ಪುಟ್ಟ ಹೆಜ್ಜೆ ಇಡುತ್ತಿರುವ ಅವರಿಗೆ ಸಂಗೀತ ಎಂದರೆ ಪ್ರಾಣ.
ಮೇಘನಾ ಅವರು ವಂದಿಗೆ ಗ್ರಾ ಪಂ ವ್ಯಾಪ್ತಿಯ ಹನುಮಟ್ಟ ಗ್ರಾಮದಲ್ಲಿರುವ ಶ್ರೀಕಾಂತ ಮತ್ತು ಗೀತಾ ಆಗೇರರ ಪುತ್ರಿ. ಬಡ ಕುಟುಂಬದಲ್ಲಿ ಹುಟ್ಟಿದ ಅವರಿಗೆ ಸೂಕ್ತ ತರಬೇತಿ ಸಿಗಲಿಲ್ಲ. ಆದರೂ, ಪಟ್ಟುಬಿಡದೇ ಸಂಗೀತಕ್ಕಾಗಿ ಅವರು ಶ್ರಮಿಸಿದರು. `ಸರ್ಕಾರಿ ಶಾಲೆಯಲ್ಲಿ ಕಲಿಯುವಾಗ ಅಲ್ಲಿನ ಶಿಕ್ಷಕರಾದ ಲಕ್ಷ್ಮೀ ನಾಯಕ ಹಾಗೂ ಭಾರತಿ ಎಂ ನಾಯ್ಕ ಅವರೇ ನನ್ನ ಮೊದಲ ಗುರು. ಅವರು ಹೇಳಿಕೊಟ್ಟ ರಾಗಗಳು ಸಂಗೀತ ಕ್ಷೇತ್ರಕ್ಕೆ ಭದ್ರ ಬುನಾದಿಯಾಗಲು ಕಾರಣ’ ಎನ್ನುತ್ತ ಮೇಘನ ಭಾವುಕರಾದರು.
ಪ್ರೌಢ ಶಾಲೆಯಲ್ಲಿ ಮಧುರಾ ಭಟ್ ಮತ್ತು ಪ್ರಶಾಂತ ನಾಯ್ಕ ಹೊಸಗದ್ದೆ ನೆರವಿನಿಂದ ಇನ್ನಷ್ಟು ಕಲಿತರು. ಕೆ ರಮೇಶ ಸಾರಥ್ಯದ ಸಂಗಾತಿ ರಂಗಭೂಮಿ ಪ್ರವೇಶಿಸಿ, ಅಲ್ಲಿಂದ ಸಂಗೀತಾಭ್ಯಾಸ ನಡೆಸಿದರು. ಅದೆಲ್ಲದರ ಪರಿಣಾಮವಾಗಿ ಇದೀಗ ಅವರಿಗೆ ಅಲ್ಲಲ್ಲಿ ವೇದಿಕೆ ದೊರೆಯುತ್ತಿದೆ. `ಸಂಗೀತವೇ ಉಸಿರು’ ಎಂದು ನಂಬಿರುವ ಅವರು ಹೀಗೆ ಮುಂದುವರೆದಲ್ಲಿ ಸಂಗೀತ ಲೋಕಕ್ಕೆ ಮೆರಗು ನೀಡುವುದು ಸುಳ್ಳಲ್ಲ.
– ಅಕ್ಷಯಕುಮಾರ್ ಎಸ್, ವರದಿಗಾರರು `ನುಡಿಜೇನು’
Discussion about this post