ಕಾರವಾರದಲ್ಲಿ ಕಡಲ ಅಬ್ಬರ ಜೋರಾಗಿದ್ದು ಸರ್ಕಾರಿ ಸ್ವಾಮ್ಯದ ನಾಲ್ಕು ಕಾಟೇಜ್’ಗಳು ಸಮುದ್ರ ಪಾಲಾಗಿದೆ.
ದೇವಭಾಗದಲ್ಲಿ ‘ಜಂಗಲ್ ಲಾಡ್ಜ್’ ಅಧೀನದಲ್ಲಿರುವ ಬೀಚ್ ರೆಸಾರ್ಟ್’ನ ಕೋಣೆಗಳು ಅಲೆಗಳ ರಭಸಕ್ಕೆ ನೆಲಸಮವಾಗಿವೆ. ಜೂ 26ರ ರಾತ್ರಿ ಹಾಗೂ 27ರ ಬೆಳಗ್ಗೆ ಅರಬ್ಬಿ ಸಮುದ್ರದ ಅಲೆಗಳು ನಿರಂತರವಾಗಿ ಕಾಟೇಜ್’ಗೆ ಅಪ್ಪಳಿಸಿವೆ. ಅಲೆಗಳ ನಿರಂತರ ಅಬ್ಬರದಿಂದ ಹಂತ ಹಂತವಾಗಿ ಕಟ್ಟಡ ಕುಸಿದುಬಿದ್ದಿವೆ. ಕಾಂಡ್ಲಾ ವನಕ್ಕೆ ಹೊಂದಿಕೊಂಡು ತಲಾ 5 ಲಕ್ಷ ರೂ ವೆಚ್ಚದಲ್ಲಿ ಈ ಕಾಟೇಜ್ ನಿರ್ಮಿಸಲಾಗಿತ್ತು. 20ಕ್ಕೂ ಅಧಿಕ ಕೊಠಡಿಗಳು ಇಲ್ಲಿದ್ದು, ಸರಿಸುಮಾರು 6 ಸಾವಿರ ರೂಪಾಯಿ ಪಡೆದು ಪ್ರವಾಸಿಗರಿಗೆ ಕೊಠಡಿಗಳನ್ನು ನೀಡಲಾಗುತ್ತಿತ್ತು. ವ್ಯಾಪಕ ಮಳೆಯಿಂದಾಗಿ ಕಟ್ಟಡದ ಜೊತೆ ಒಳಗಿದ್ದ ಪೀಠೋಪಕರಣಗಳು ನೀರಿನಲ್ಲಿ ಕೊಚ್ಚಿ ಹೋಗಿದೆ.
ಸೆಪ್ಟೆಂಬರ್ ನಂತರ ಎಲ್ಲಾ ಕೊಠಡಿಗಳು ಭರ್ತಿಯಾಗುತ್ತಿದ್ದವು. ಪ್ರಸ್ತುತ ಮಳೆಗಾಲವಾಗಿದ್ದರಿಂದ ಹೆಚ್ಚಿನ ಪ್ರವಾಸಿಗರು ಸ್ಥಳದಲ್ಲಿರಲಿಲ್ಲ. ಅವಾಂತರದ ವೇಳೆ ಕಾಟೇಜ್’ನಲ್ಲಿ ಸಹ ಅತಿಥಿಗಳು ಇರಲಿಲ್ಲ.
Discussion about this post