ಟಾಮ್ ಅಂಡ್ ರ‍್ರಿ, ಮಿಕ್ಕಿಮೌಸ್, ಡೊರೆಮನ್, ಟಿಮಾನ್, ಕಾಂಗಾ, ಎಂವರ‍್ಸ್, ಪಾಪೆಯೆ, ಮಿಚಿಗನ್, ಶ್ರೇಕ್, ಆಂಗ್ರಿ ಬರ್ಡ್ಸ್, ಛೋಟಾ ಭೀಮ್, ಅಲಾದಿನ್, ಜಂಗಲ್ ಬುಕ್‌ನ ಮೊಗ್ಲಿ, ಸ್ಕಿಪ್ಪಿ ಸ್ಕೆçರಲ್, ಚಿಪ್ ಆಂಡ್ ಡೆಲ್, ಮೋಟು ಪೊತ್ಲು, ಹಾಸ್ಯ ಚಕ್ರವರ್ತಿ ಚಾರ್ಲಿ ಚಾಂಪ್ಲಿನ್ ಎಲ್ಲವನ್ನು ಒಂದೇ ಕಡೆ ನೋಡಬೇಕು ಎಂದರೆ ನೇರವಾಗಿ ದಾಂಡೇಲಿಗೆ ಬರಬೇಕು!
ದಾಂಡೇಲಿ ಪಟ್ಟಣದ ಬಸ್ಸು ನಿಲ್ದಾಣದ ಹಿಂದೆ 25 ಎಕರೆ ಜಾಗದಲ್ಲಿ `ದಂಡಾಕಾರಣ್ಯ ಇಕೋ ಪಾರ್ಕ್’ ನಿರ್ಮಿಸಲಾಗಿದೆ. ಅರಣ್ಯ ಇಲಾಖೆಯ ಉತ್ಸಾಹಕ್ಕೆ ಈ ಉದ್ಯಾನವನ ಉದ್ಘಾಟನೆಯಾಗಿದ್ದು, ಒಳಗೆ ಕಾಲಿಡುತ್ತಿದ್ದಂತೆ ಇರುವೆಗಳ ದೊಡ್ಡ ಸಾಲು ದರ್ಶನವಾಗುತ್ತದೆ. `ಅರೇ ಇರುವೆಗಳು ಕಚ್ಚಬಹುದು ನಿಧಾನವಾಗಿ ನಡೆಯಿರಿ’ ಎಂದು ಹೇಳುತ್ತಾ ಮುಂದೆ ಸಾಗಿದಾಗ ಮರದ ಮರೆಯಿಂದ ಹೊರಬಂದ ಚಾರ್ಲಿ ಚಾಪ್ಲಿನ್ ಸಿಗುತ್ತಾನೆ. ತಮಾಷೆ ಪ್ರಸಂಗವೊAದನ್ನು ತೋರಿಸಲು ಮಕ್ಕಳನ್ನು ಆಹ್ವಾನಿಸುವಂತೆ ಕಾಣುತ್ತದೆ. ಚಾಪ್ಲಿನ್ ಟ್ರೇಡ್ ಮಾರ್ಕ್ ಎನಿಸಿರುವ ಟೋಪಿ ತಲೆಯ ಮೇಲಿದ್ದರೂ ಕೋಲನ್ನು ಅವರು ಎಲ್ಲಿಯೋ ಬಿಟ್ಟು ಬಂದಿರುವoತಿದೆ.
ಯಾವುದೇ ಮಾನಸಿಕ ಒತ್ತಡ ಇಲ್ಲದೇ ಹಾಯಾಗಿರುವ ಕಥಾ ಹಂದರ ಹೊಂದಿರುವ ಶಿನ್ ಚಾನ್, ಮೆಲ್ ಪ್ರಾಗ್ 19-20ನೇ ಶತಮಾನದ ಹಾಡುಗಳನ್ನು ಹಾಡುತ್ತಾ ಡ್ಯಾನ್ಸ್ ಮಾಡುತ್ತಾ ಇರುವ ಮಿಚಿಗನ್, ಪುರಪುರಿಯಲ್ಲಿ ವಾಸಿಸುವ ಮೋಟು ಮತ್ತು ಪತ್ಲು ಎಂಬ ಆಪ್ತಸ್ನೇಹಿತರು ಎಲ್ಲರೂ ಇಲ್ಲಿ ಸಿಗುತ್ತಾರೆ. ಮೋಟು ಯಾವಾಗಲೂ ಸಮಸ್ಯೆಗಳನ್ನು ಸೃಷ್ಠಿಸುತ್ತಾನೆ. ಪತ್ಲು ಮಾತ್ರ ಅವುಗಳಿಗೆ ಪರಿಹಾರ ಹುಡುಕುತ್ತಲೇ ಇರುತ್ತಾನೆ. ದೋಲಕಪುರದ ಛೋಟಾ ಭೀಮ ಕುಟುಂಬ ಒಂದೆಡೆಯಾದರೆ, ಇನ್ನೊಂದೆಡೆ ಕಾಡಿನ ಪ್ರಾಣಿಗಳ ಸಹವಾಸದಲ್ಲಿ ಬೆಳೆದ ಮೊಗ್ಲಿ. ಆಮೆಯೊಂದರ ಮೇಲೆ ಸವಾರಿ ಮಾಡುತ್ತಿರುವ ದೃಶ್ಯ ನಗೆ ಉಕ್ಕಿಸುತ್ತದೆ. ಸೂಪರ್ ಮ್ಯಾನ್ ಸಹ ಇಲ್ಲಿ ತನ್ನ ತೋಳ್ಬಲ ಪ್ರದಶಿಸುತ್ತಾನೆ. ಜೀವನವಿಡೀ ಸಗಣಿಯನ್ನು ಉಂಡೆಮಾಡಿ ಅದನ್ನು ಉರುಳಿಸಕೊಂಡು ಹೋಗುವುದರಲ್ಲೇ ಕಾಲ ಕಳೆಯುವ ಕಾಪೋರೋಫಾಗಸ್ ಕೀಟಗಳು ಇಲ್ಲಿವೆ. ಶುಭ್ರವಾದ ನಯವಾದ ಸಗಣಿಯನ್ನು ಹುಡುಕುವುದರೊಂದಿಗೆ ತನ್ನ ದಿನ ಪ್ರಾರಂಭಿಸುವ `ಡಂಗ್-ಬೀಟಲ್ಸ್’ ಸಹ ಸಿಮೆಂಟಿನಲ್ಲಿ ಕೆತ್ತನೆಯಾಗಿದೆ.
40ಕ್ಕೂ ಅಧಿಕ ಕಲಾವಿದರು ಪರಿಶ್ರಮವಹಿಸಿ 106 ಕಾರ್ಟೂನ್ ಶಿಲ್ಪಗಳನ್ನು ನಿರ್ಮಿಸಿದ್ದಾರೆ. ಇಟ್ಟಿಗೆ, ಕಬ್ಬಿಣ, ಮರಳು ಇತರೆ ಕಚ್ಚಾ ಸಾಮಗ್ರಿಗಳನ್ನು ರಸವತ್ತಾಗಿ ಬಳಸಲಾಗಿದೆ. ಜೊತೆಗೆ ಮನರಂಜನೆಗಾಗಿ ಜಿಮಾಶಿಯಂ, ಮಲ್ಟಿ ಪ್ಲೇ ಮಾಡಲಾಗಿದೆ. ದಂಡಕಾರಣ್ಯದ ಒಳಗಿರುವ ಯಾವುದೇ ಒಂದು ಮರವನ್ನು ಕಡಿಯದೇ, ಆಲಂಕಾರಿಕ ಹೂವು ಮತ್ತು ಹಣ್ಣಿನ ಗಿಡಗಳನ್ನೂ ನಾಟಿ ಮಾಡಿ ಕಾರ್ಟೂನ್ ಲೋಕ ಸೃಷ್ಟಿಸಲಾಗಿದೆ.
ಪ್ರತಿ ಶನಿವಾರ ಮತ್ತು ಭಾನುವಾರ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಪ್ರತಿಭಾನ್ವೇಷಣೆ ಕಾರ್ಯವನ್ನು ಇಲ್ಲಿ ನಡೆಸಲಾಗುತ್ತದೆ. ಈ ಕಾರ್ಟೂನ್ ಲೋಕ ಎಲ್ಲರಿಗೂ ಪರಿಸರದ ಮಹತ್ವವನ್ನು ಮನವರಿಕೆ ಮಾಡಿಕೊಡುವುದರ ಜೊತೆ ಮನರಂಜನೆಯನ್ನು ನೀಡುತ್ತದೆ.
– ಟಿ ಶಿವಕುಮಾರ್
ಹಾನಗಲ್, ಹಾವೇರಿ
Discussion about this post