ರೈತರ ನೆರವಿಗೆ ‘ರಾಣೇಬೆನ್ನೂರು ಕಾ ರಾಜಾ’ ಮಹಾಗಣಪತಿ ಉತ್ಸವದ ವಿಶೇಷ ಸಂಕಲ್ಪ
ರಾಣೇಬೆನ್ನೂರು: ರೈತರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ರಾಣೇಬೆನ್ನೂರಿನ ವಂದೇಮಾತರಂ ಸ್ವಯಂಸೇವಾ ಸಂಸ್ಥೆ ವತಿಯಿಂದ ಈ ಬಾರಿ ವಿನೂತನವಾಗಿ ಗಣೇಶೋತ್ಸವ ಆಚರಿಸಲು ನಿರ್ಧರಿಸಲಾಗಿದೆ.
ಕಳೆದ 17 ವರ್ಷಗಳಿಂದ ‘ರಾಣೇಬೆನ್ನೂರು ಕಾ ರಾಜಾ’ ಮಹಾಗಣಪತಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವ ಸಂಸ್ಥೆ, 2026ರ ಗಣೇಶೋತ್ಸವವನ್ನು “ನಮ್ಮ ಚಿತ್ತ ರೈತನತ್ತ–2026” ಎಂಬ ವಿಶೇಷ ಸಂಕಲ್ಪದೊಂದಿಗೆ ಆಚರಿಸುತ್ತಿದೆ.
ಮುಂಗಾರು ಆರಂಭದಲ್ಲಿ ಮಳೆಯ ಕೊರತೆಯಿಂದ ರೈತರು ಬಿತ್ತನೆ ಕಾರ್ಯದಲ್ಲಿ ಸಂಕಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ, ಈ ಬಾರಿ ಗಣೇಶೋತ್ಸವದ ಅದ್ದೂರಿತನಕ್ಕೆ ಕಡಿವಾಣ ಹಾಕಿ ಒಂದು ದಿನ ಮಾತ್ರ ವಿಜೃಂಭಣೆಯಿಂದ ಉತ್ಸವ ನಡೆಸಿ, ಉಳಿತಾಯವಾಗುವ ಹಣವನ್ನು ಅತಿ ಸಣ್ಣ ರೈತ ಕುಟುಂಬಗಳ ನೆರವಿಗೆ ಬಳಸಲು ಸಂಸ್ಥೆ ನಿರ್ಧರಿಸಿದೆ.
ರಾಣೇಬೆನ್ನೂರು ತಾಲೂಕಿನ ಆಯ್ದ 16 ಗ್ರಾಮಗಳ ಸುಮಾರು 2,800ರಿಂದ 3,000 ಅತಿ ಸಣ್ಣ ರೈತ ಕುಟುಂಬಗಳಿಗೆ ತಲಾ ₹5,000 ಧನಸಹಾಯ ನೀಡುವ ಗುರಿಯನ್ನು ಸಂಸ್ಥೆ ಹೊಂದಿದೆ. ಅರ್ಹ ರೈತರಿಂದ ಗಣೇಶ ಚತುರ್ಥಿಯ ನಂತರ ಆಯಾ ಗ್ರಾಮಗಳಲ್ಲಿಯೇ ಅರ್ಜಿಗಳನ್ನು ಸ್ವೀಕರಿಸಿ, ದಾಖಲೆಗಳ ಪರಿಶೀಲನೆಯ ಬಳಿಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಸೋಮಲಾಪುರ, ಹೊಸಚಂದಾಪುರ, ಮೈದೂರು, ಅಂಕಸಾಪುರ, ನದಿಹರಳಹಳ್ಳಿ, ವಡೇರಾಯನಹಳ್ಳಿ, ಪತ್ತೆಪುರ, ತುಮ್ಮಿನಕಟ್ಟಿ, ಹಳೇಚಂದಾಪುರ, ಶ್ರೀರಾಮಪುರ ತಾಂಡಾ, ಕೋಡಿಯಾಲ, ಕಮದೋಡ, ಚೌಡಯ್ಯದಾನಪುರ, ಖಂಡೇರಾಯನಹಳ್ಳಿ, ತೆರೇದಹಳ್ಳಿ ಹಾಗೂ ಕಮದೋಡ ತಾಂಡಾ ಗ್ರಾಮಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ.
“ಇದು ಕೇವಲ ಧನಸಹಾಯವಲ್ಲ; ಸಂಕಷ್ಟದ ಸಮಯದಲ್ಲಿ ಅನ್ನದಾತನೊಂದಿಗೆ ನಾವಿದ್ದೇವೆ ಎಂಬ ಭರವಸೆ ನೀಡುವ ಪ್ರಯತ್ನ” ಎಂದು ಸಂಸ್ಥೆ ತಿಳಿಸಿದೆ.
ಸೆ.14ರಂದು ಮಹಾಗಣಪತಿ ಪ್ರತಿಷ್ಠಾಪನೆ
2026ರ 18ನೇ ವರ್ಷದ ‘ರಾಣೇಬೆನ್ನೂರು ಕಾ ರಾಜಾ’ ಮಹಾಗಣಪತಿ ಉತ್ಸವವು ಸೆಪ್ಟೆಂಬರ್ 14ರಂದು ಸೋಮವಾರ ಬೆಳಗ್ಗೆ 9 ಗಂಟೆಗೆ ನಗರಸಭಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಸಾರ್ವಜನಿಕರಿಗೆ ದರ್ಶನ, ಪ್ರಸಾದ ವಿತರಣೆ ಹಾಗೂ ವಿಶೇಷ ರಕ್ತದಾನ ಶಿಬಿರ ನಡೆಯಲಿದೆ.
ರಾತ್ರಿ 11 ಗಂಟೆಗೆ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಿ, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಬಳಿಕ ಕುರುಬಗೇರಿಯ ಬನಶಂಕರಿ ರಸ್ತೆಯಲ್ಲಿರುವ ಕೊಪ್ಪದವರ ಓಣಿಯ ಬಾವಿಯಲ್ಲಿ ಗಣಪತಿ ವಿಸರ್ಜನೆ ನಡೆಯಲಿದೆ.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ಗಣೇಶೋತ್ಸವವನ್ನು ಸರಳವಾಗಿ ಆಚರಿಸಿ, ಸಾವಿರಾರು ಕುಟುಂಬಗಳಿಗೆ ಆಹಾರ ಮತ್ತು ಔಷಧಿ ಕಿಟ್‌ಗಳನ್ನು ವಿತರಿಸಿದ್ದ ಸಂಸ್ಥೆ, ಇದೇ ಸೇವಾ ಪರಂಪರೆಯನ್ನು ಮುಂದುವರಿಸಿಕೊಂಡು ಈ ಬಾರಿ ಅನ್ನದಾತನ ನೆರವಿಗೆ ಮುಂದಾಗಿದೆ
“ರೈತ ನಕ್ಕರೆ ದೇಶ ನಗುತ್ತದೆ, ಹೊಲ ಹಸಿರಾದರೆ ರೈತನ ಬದುಕು ಹಸನಾಗುತ್ತದೆ” ಎಂಬ ಸಂದೇಶದೊಂದಿಗೆ ಈ ವರ್ಷದ ಗಣೇಶೋತ್ಸವವನ್ನು ರೈತಪರ ಸೇವೆಗೆ ಸಮರ್ಪಿಸಲಾಗಿದೆ.



