ಹಾನಗಲ್: ಹಲವು ದಶಕಗಳಿಂದ ಮನೆ ಮಾಲಿಕತ್ವದ ಹಕ್ಕಿಲ್ಲದೆ ಆತಂಕದಲ್ಲಿದ್ದ ಗುರುರಾಯಪಟ್ಟಣ ಗ್ರಾಮದ 150 ಕುಟುಂಬಗಳಿಗೆ ಇದೀಗ ಹೊಸ ಬೆಳಕು ಮೂಡಿದೆ. ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಮಾನೆ ಶ್ರೀನಿವಾಸ ಅವರು 150 ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವದ ಹಕ್ಕುಪತ್ರಗಳನ್ನು ವಿತರಿಸಿದರು.
ಮನೆ ಮಾಲಿಕತ್ವದ ದಾಖಲೆಗಳಿಲ್ಲದೆ ಹಲವು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದ ಫಲಾನುಭವಿ ಕುಟುಂಬಗಳಿಗೆ ಮನೆ ನೋಂದಣಿ, ಇ-ಸ್ವತ್ತು ಹಾಗೂ ಗಣಕೀಕೃತ ಹಕ್ಕುಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಶಾಶ್ವತ ಮಾಲಿಕತ್ವದ ಹಕ್ಕನ್ನು ಕಲ್ಪಿಸಲಾಗಿದೆ.
ಹಕ್ಕುಪತ್ರ ವಿತರಣೆ ಬಳಿಕ ಫಲಾನುಭವಿ ಕುಟುಂಬಗಳಲ್ಲಿ ಸಂತಸ ಮನೆ ಮಾಡಿದ್ದು, ಹಲವು ವರ್ಷಗಳ ಆತಂಕಕ್ಕೆ ಇದೀಗ ಪರಿಹಾರ ದೊರೆತಂತಾಗಿದೆ.
ಭೂಗ್ಯಾರಂಟಿ ಕಾರ್ಯಕ್ರಮದಡಿ ಹಾನಗಲ್ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯ ಫಲಾನುಭವಿ ಕುಟುಂಬಗಳು ಮನೆ ಮಾಲಿಕತ್ವದ ಹಕ್ಕು ಪಡೆದಿರುವುದು ಗಮನಾರ್ಹವಾಗಿದೆ.
ದಶಕಗಳಿಂದ ಸ್ವಂತ ಮನೆಯ ಮಾಲಿಕತ್ವದ ದಾಖಲೆಗಾಗಿ ಕಾಯುತ್ತಿದ್ದ ಕುಟುಂಬಗಳಿಗೆ ಹಕ್ಕುಪತ್ರ ದೊರೆತಿರುವುದು ಅವರ ಬದುಕಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ.




