ರಾಣೆಬೆನ್ನೂರು: ತಾಲೂಕಿನ ಬಿರ್ಲಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 70ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರನ್ನು 2001ರಲ್ಲಿ ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ತೆಗೆದುಹಾಕಲಾಗಿದೆ. ಕಳೆದ 25 ವರ್ಷಗಳಿಂದ ನ್ಯಾಯ ಹಾಗೂ ಪರಿಹಾರಕ್ಕಾಗಿ ಬೆಳಗಾವಿ, ಹುಬ್ಬಳ್ಳಿ ಮತ್ತು ಹಾವೇರಿ ಕಾರ್ಮಿಕರ ಕೋರ್ಟ್‌ಗಳಿಗೆ ಅಲೆದಾಡುತ್ತಿರುವ ಈ ಕಾರ್ಮಿಕರ ಸಮಸ್ಯೆಗೆ ಮಾನವೀಯ ನೆಲೆಯಲ್ಲಿ ಪರಿಹಾರ ಕಲ್ಪಿಸಬೇಕು ಎಂದು ರಾಜ್ಯ ರೈತ ಸಂಘದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಲಾಯಿತು.
ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, 2001ರಲ್ಲಿ ಕೆಲಸ ಕಳೆದುಕೊಂಡಾಗ ಬಹುತೇಕ ಮಹಿಳೆಯರು ಸುಮಾರು 30 ವರ್ಷದ ವಯೋಮಾನದವರಾಗಿದ್ದರು. ಇದೀಗ ಅವರು 60ರಿಂದ 65 ವರ್ಷ ದಾಟಿದ್ದು, ಕೆಲವರು 75 ವರ್ಷಕ್ಕೂ ಮೇಲ್ಪಟ್ಟಿದ್ದಾರೆ. ನ್ಯಾಯಕ್ಕಾಗಿ ಹೋರಾಡುತ್ತಿದ್ದ ಸುಮಾರು 70 ಕಾರ್ಮಿಕರಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಉಳಿದ ಸುಮಾರು 25 ಜನ ಮಾತ್ರ ನ್ಯಾಯಾಲಯದ ಹೋರಾಟ ಮುಂದುವರಿಸಿದ್ದಾರೆ.
ಕೆಲವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರೆ, ಇನ್ನು ಕೆಲವರು ನಿರಂತರವಾಗಿ ನ್ಯಾಯಾಲಯಗಳಿಗೆ ಅಲೆದಾಡಿ ದೈಹಿಕ ಹಾಗೂ ಮಾನಸಿಕವಾಗಿ ಬಳಲಿದ್ದಾರೆ. ಬಹುತೇಕರು ಬಡ ಕುಟುಂಬಗಳ ಹಿನ್ನೆಲೆಯವರಾಗಿದ್ದು, ಜೀವನದ ಇಳಿವಯಸ್ಸಿನಲ್ಲಿ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಕಂಪನಿಯೊಂದಿಗೆ ಮಾತುಕತೆ ನಡೆಸಿ, ಮಾನವೀಯ ದೃಷ್ಟಿಯಿಂದ ಸೂಕ್ತ ಪರಿಹಾರ ಕೊಡಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಈ ಬಗ್ಗೆ ಕಂಪನಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಮುಖರಾದ ಹನಮಜ್ಜಿ, ಹೊನ್ನಮ್ಮ, ಈರಮ್ಮ, ಈರಮ್ಮ ಶಿಗ್ಗಾಂವ, ಚೌಡಮ್ಮ, ಜೋಗಮ್ಮ, ಜಗದೀಶ್ವರಿ, ಬಸಮ್ಮ ಕರಡಪ್ಪನವರ, ಚನ್ನಮ್ಮ ಶಂಕ್ರಿಮಠ, ಶಿವಮೂರ್ತೆವ್ವ ಎಚ್. ಮತ್ತಿತರರಿದ್ದರು.




