ಹಾನಗಲ್ಲ: ಮಂದಿರಗಳು ಸಾಮರಸ್ಯದ ಕೇಂದ್ರಗಳಾಗಿ ಮೌಢ್ಯವನ್ನು ದೂರ ಮಾಡುವ ಭಕ್ತಿ ಸ್ಥಾನಗಳಾದರೆ ಮಾತ್ರ ಅವು ಸಮಾಜಕ್ಕೆ ಸಾರ್ಥಕತೆ ನೀಡಬಲ್ಲವು ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ನುಡಿದರು.
ಪಟ್ಟಣದಲ್ಲಿ ಗ್ರಾಮದೇವಿ ಶಿಲಾಮಂದಿರ ಉದ್ಘಾಟನೆ ನಿಮಿತ್ತ ಏರ್ಪಡಿಸಿದ್ದ ಧರ್ಮ ಸಭೆಯ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಹಿಂದುಳಿದ ಶೋಷಿತ ದಲಿತ ಕುಟುಂಬಗಳು ಮೌಢ್ಯದಿಂದಲೇ ಆರ್ಥಿಕ, ಸಾಮಾಜಿಕವಾಗಿ ಹಾಳಾಗಿವೆ. ಶಿಕ್ಷಣಕ್ಕೆ ಒತ್ತು ನೀಡುವ ಬದಲು ಮೌಢ್ಯಾಚರಣೆಯಲ್ಲಿ ಮುಳುಗಿದ್ದರೆ ಅವರ ಬದುಕು ಹಸನಾಗಲು ಸಾಧ್ಯವಿಲ್ಲ. ದೇವಸ್ಥಾನದ ಗಂಟೆಯ ನಾದಕ್ಕಿಂತ ಶಾಲೆಯ ಗಂಟೆಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಶ್ರೀಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ಮಾತನಾಡಿ, ದೇವಿ ಪುರಾಣವೆಂದರೆ ನಮ್ಮ ದೇಹದ ಪುರಾಣವೇ ಆಗಿದೆ. ನಮ್ಮಲ್ಲಿ ರಾಕ್ಷಸ ಗುಣಗಳಿಂದ ವಿಮುಕ್ತಿ ಹೊಂದಿ, ಅವಗುಣ ಅಹಂಗಳನ್ನು ಸಂಹಾರ ಮಾಡಿಕೊಂಡು, ಆಸೆ ಅತೃಪ್ತಿಯಿಂದ ಮುಕ್ತಿ ಪಡೆದು, ಅರಿವಿನ ದೇವರ ಪೂಜೆ ಮಾಡಿ ಬದುಕು ಅರಳಿಸಿಕೊಳ್ಳಬೇಕು ಎಂದರು.
ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನದ ಜಗದ್ಗುರು ಶಾಂತವೀರ ಮಹಾಸ್ವಾಮೀಜಿ, ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಜಗದ್ಗುರು ಮಾದಾರ ಚನ್ನಯ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ಹಿಸಿ ಮಾತನಾಡಿದ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಂಜುನಾಥ ನಾಗಜ್ಜನವರ, ಶಿಲಾ ಮಂದಿರ ನಿರ್ಮಾಣಕ್ಕೆ ಭಕ್ತರು ದಾನ ದೇಣಿಗೆ ನೀಡಿಸಿದ್ದಾರೆ. ಇದು ಇಡೀ ಭಕ್ತ ಸಮೂಹದ ಯಶಸ್ಸು ಎಂದರು.
ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಗುಂಡೂರಿನ ಸೇವಾಲಾಲ ಬಂಜಾರ ಗುರುಪೀಠದ ಶ್ರೀ ತಿಪ್ಪೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಸುರೇಶ ಪೂಜಾರ, ಗಣೇಶ ಮೂಡ್ಲಿಯವರ, ರಾಜು ಗೌಳಿ, ಭೋಜರಾಜ ಕರೂದಿ, ಯಲ್ಲಪ್ಪ ಶೇರಖಾನೆ, ನಾಗೇಂದ್ರ ಬಂಕಾಪುರ, ಬಾಳಾರಾಮ ಗುರ್ಲಹೊಸೂರ, ವಿರೂಪಾಕ್ಷಪ್ಪ ಕಡಬಗೇರಿ, ಸಂಜಯ ಬೇದ್ರೆ, ನಾರಾಯಣ ಅಥಣಿ, ಈಶ್ವರ ವಾಲ್ಮೀಕಿ, ರವಿಚಂದ್ರ ಪುರೋಹಿತ, ಗುರುರಾಜ ನಿಂಗೋಜಿ, ರಾಮು ಯಳ್ಳೂರ, ಆದರ್ಶ ಶೆಟ್ಟಿ, ಕೃಷ್ಣ ಬಾಗಲೆ, ಕೀರ್ತಿ ಚಿನ್ನಮುಳಗುಂದ, ಸುನೀಲಕುಮಾರ ಅರ್ಕಸಾಲಿ, ಮಾಲತೇಶ ಕೊಲ್ಲಾಪೂರ, ಮನೋಜ ಕಲಾಲ ಅವರನ್ನು ಸನ್ಮಾನಿಲಾಯಿತು. ಸುನೀಲ ಅರ್ಕಸಾಲಿ ಕಾರ್ಯಕ್ರಮ ನಿರ್ವಹಿಸಿದರು.




