ಹಾವೇರಿ: ಪಟ್ಟಣದ ಟೆಂಪೋ ನಿಲ್ದಾಣದ ಬಳಿಯಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಖಂಡಿಸಿ ಶ್ರೀರಾಮ ಸೇನೆ ಹಾಗೂ ಬಿಜೆಪಿಯಿಂದ ಕರೆ ನೀಡಲಾಗಿರುವ ಶಿಗ್ಗಾಂವ ಬಂದ್‌ಗೆ ಪಟ್ಟಣದ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಂದ್‌ಗೆ ಬೆಂಬಲ ಸೂಚಿಸಿದ ಕಿರಾಣಿ ಅಂಗಡಿಗಳ ಮಾಲೀಕರು, ಹೋಟೆಲ್ ಉದ್ಯಮಿಗಳು ಸೇರಿದಂತೆ ವಿವಿಧ ಸಣ್ಣಪುಟ್ಟ ವ್ಯಾಪಾರಸ್ಥರು ಬುಧವಾರ ಬೆಳಗ್ಗೆಯಿಂದಲೇ ತಮ್ಮ ಅಂಗಡಿ-ಮುಂಗಟ್ಟುಗಳನ್ನು ತೆರೆಯದೆ ಬಂದ್‌ನಲ್ಲಿ ಪಾಲ್ಗೊಂಡರು.
ದೇವಾಲಯದಲ್ಲಿ ನಡೆದಿರುವ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಬಹುತೇಕ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಿಗಾ ವಹಿಸಿದ್ದಾರೆ.




