ಹಾವೇರಿ: ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಒಂದೇ ದರ ನಿಗದಿಪಡಿಸಬೇಕು. ಈ ವರ್ಷ ಒಂದು ಟನ್ ಕಬ್ಬಿಗೆ ₹5,500 ದರ ನಿಗದಿಪಡಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಹಾವೇರಿ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆಗ್ರಹಿಸಿದರು.
ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ಶ್ರೀ ಸಂಗನಬಸವ ಕಲ್ಯಾಣ ಮಂಟಪದಲ್ಲಿ ನಡೆದ ರೈತರ ಬೃಹತ್ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳ ಎದುರು ತೂಕದ ಯಂತ್ರಗಳನ್ನು ನಿರ್ಮಿಸಬೇಕು. ಕಬ್ಬಿನ ಗುಣಮಟ್ಟ ಹಾಗೂ ರಿಕವರಿ ಕುರಿತು ರೈತರಿಗೆ ಅನುಕೂಲವಾಗುವಂತೆ ಜಿಲ್ಲೆಗೆ ಪ್ರತ್ಯೇಕ ರಿಕವರಿ ಲ್ಯಾಬ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಿರುವ ಬಾಕಿ ಹಣವನ್ನು ಕೂಡಲೇ ಕೊಡಿಸಬೇಕು. ಉತ್ತರ ಕರ್ನಾಟಕದ ಎಲ್ಲ ಕಬ್ಬು ಬೆಳೆಗಾರರಿಗೆ ಒಂದೇ ದರ ನಿಗದಿಯಾಗಬೇಕು. ದರ ನಿಗದಿಯಾಗುವವರೆಗೂ ಯಾವುದೇ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬಾರದು ಎಂದು ಅವರು ಹೇಳಿದರು.
‘ರಿಕವರಿ’ ಹೆಸರಿನಲ್ಲಿ ರೈತರಿಗೆ ಮೋಸ
ರಿಕವರಿ ಎಂಬುದು ಕಾರ್ಖಾನೆ ಮಾಲೀಕರು ಕಬ್ಬು ಬೆಳೆಗಾರರಿಗೆ ಮೋಸ ಮಾಡಲು ಬಳಸುತ್ತಿರುವ ಅಸ್ತ್ರವಾಗಿದೆ ಎಂದು ಆರೋಪಿಸಿದ ಭುವನೇಶ್ವರ ಶಿಡ್ಲಾಪುರ, ರೈತರ ಒಗ್ಗಟ್ಟನ್ನು ಒಡೆಯಲು ಕಾರ್ಖಾನೆಗಳವರು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಕಬ್ಬು ಕಟಾವಿಗೆ ಮುಂದಾಗಬಾರದು ಎಂದು ಕರೆ ನೀಡಿದರು.
ಪ್ರಸ್ತುತ ಸಕ್ಕರೆಯ ಬೆಲೆ ಸಾಕಷ್ಟು ಹೆಚ್ಚಾಗಿದ್ದು, ಅದರ ಲಾಭ ರೈತರಿಗೂ ದೊರೆಯಬೇಕು. ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ಸಕ್ಕರೆಯನ್ನು ಕೆ.ಜಿ.ಗೆ ₹50 ಹಾಗೂ ವಾಣಿಜ್ಯ ಬಳಕೆಗೆ ₹100 ದರದಲ್ಲಿ ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿರುವ ಎಥನಾಲ್‌ನ್ನು ಸಂಪೂರ್ಣವಾಗಿ ಸರ್ಕಾರವೇ ಖರೀದಿಸಿದರೆ ರೈತರಿಗೆ ಹೆಚ್ಚಿನ ಕಬ್ಬಿನ ದರ ನೀಡಲು ಅನುಕೂಲವಾಗಲಿದೆ ಎಂದು ಹೇಳಿದರು.
ಕೃಷಿಗೆ ಉದ್ಯೋಗ ಖಾತ್ರಿ ಯೋಜನೆ ಅಳವಡಿಸಲು ಆಗ್ರಹ
ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿಗೆ ಅನುಕೂಲವಾಗುವಂತೆ ಅಳವಡಿಸಿದರೆ ರೈತರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬಹುದು. ಸ್ವಾಮಿನಾಥನ್ ಆಯೋಗದ ವರದಿಯನ್ನು ಕೂಡ ಸರ್ಕಾರ ಜಾರಿಗೆ ತರಬೇಕು ಎಂದು ಭುವನೇಶ್ವರ ಶಿಡ್ಲಾಪುರ ಆಗ್ರಹಿಸಿದರು.
ಸಚಿವರ ಮನೆ ಎದುರು ಹೋರಾಟದ ಎಚ್ಚರಿಕೆ
ರೈತರ ಈ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಹಾವೇರಿ ಜಿಲ್ಲೆಯ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರ ಮನೆಯ ಎದುರು ಕಬ್ಬು ಬೆಳೆಗಾರರಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಆದಷ್ಟು ಬೇಗ ಜಿಲ್ಲಾಧಿಕಾರಿಗಳು ಕಬ್ಬು ಬೆಳೆಗಾರರ ಸಭೆ ಕರೆದು, ಸಚಿವ ರುದ್ರಪ್ಪ ಲಮಾಣಿ ಅವರ ನೇತೃತ್ವದಲ್ಲಿ ರೈತರೊಂದಿಗೆ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಗುತ್ತಲ ಭಾಗದ 30ಕ್ಕೂ ಹೆಚ್ಚು ಗ್ರಾಮಗಳ ಕಬ್ಬು ಬೆಳೆಗಾರರು, ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.




