ಯುಪಿಎ ಅವಧಿಯಲ್ಲಿ ಪ್ರತಿ ಹೆಕ್ಟೇರ್‌ಗೆ ₹2,000 ಪರಿಹಾರ; ಎನ್‌ಡಿಎ ಅವಧಿಯಲ್ಲಿ ₹6,500ಕ್ಕೆ ಹೆಚ್ಚಳ: ಬೊಮ್ಮಾಯಿ
ಹಾವೇರಿ: ಬರ ಮತ್ತು ಪ್ರವಾಹದ ಸಂದರ್ಭದಲ್ಲಿ ನೀಡಲಾಗುವ ಪರಿಹಾರ ಮೊತ್ತವನ್ನು ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಹೆಚ್ಚಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ಹೆಕ್ಟೇರ್‌ಗೆ ₹2,000 ಪರಿಹಾರ ನೀಡಲಾಗುತ್ತಿತ್ತು. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅವಧಿಯಲ್ಲಿ ಪರಿಹಾರ ಮೊತ್ತವನ್ನು ₹6,500ಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಬರ ಇರಲಿ ಅಥವಾ ಭೀಕರ ಪ್ರವಾಹ ಎದುರಾಗಲಿ, ಎರಡೂ ಸಂದರ್ಭಗಳಲ್ಲಿ ನೀಡಲಾಗುವ ಪರಿಹಾರ ಮೊತ್ತವನ್ನು ಎನ್‌ಡಿಎ ಸರ್ಕಾರ ಹೆಚ್ಚಿಸಿದೆ ಎಂದು ಬೊಮ್ಮಾಯಿ ತಿಳಿಸಿದರು.
ಮೋಡ ಬಿತ್ತನೆ ಕುರಿತು ಬೊಮ್ಮಾಯಿ ಪ್ರತಿಕ್ರಿಯೆ
ಮೋಡ ಬಿತ್ತನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಈ ವಿಚಾರದಲ್ಲಿ ಮಾತನಾಡುತ್ತಿರುವವರು ವಿಜ್ಞಾನಿಗಳು ಹಾಗೂ ತಜ್ಞರು ಎಂದು ವ್ಯಂಗ್ಯವಾಗಿ ಹೇಳಿದರು.
2000ನೇ ಇಸವಿಯಲ್ಲಿ ಮೋಡ ಬಿತ್ತನೆ ಕುರಿತು ಸಿಎಜಿ ವರದಿ ಇದೆ. ಅದನ್ನು ತೆಗೆದು ಪರಿಶೀಲಿಸಲಿ ಎಂದು ಅವರು ಹೇಳಿದರು.
ಸತೀಶ್ ಜಾರಕಿಹೊಳಿ ಇಡಿ ದಾಳಿ: ರಾಜಕಾರಣದ ಅಗತ್ಯವಿಲ್ಲ
ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ನಡೆದಿರುವ ಇಡಿ ದಾಳಿ ಕುರಿತು ಕಾಂಗ್ರೆಸ್ ಮಾಡುತ್ತಿರುವ ಆರೋಪಗಳ ಬಗ್ಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಜಾರಕಿಹೊಳಿ ಅವರು ಈಗಾಗಲೇ ತಮ್ಮ ಉತ್ತರ ನೀಡಿದ್ದಾರೆ. ಕೆಲವು ತಾಂತ್ರಿಕ ಕಾರಣಗಳನ್ನು ಸಹ ಅವರು ನೀಡಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿಗಳು ಈ ವಿಚಾರವನ್ನು ರಾಜಕಾರಣಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ಅಂತಿಮವಾಗಿ ಪ್ರಕರಣದಲ್ಲಿ ಏನಾದರೂ ವಿಚಾರವಿದ್ದರೆ ನ್ಯಾಯಾಲಯವೇ ನಿರ್ಧಾರ ಮಾಡುತ್ತದೆ. ಹೀಗಾಗಿ ಮುಖ್ಯಮಂತ್ರಿ ಅವರು ಈ ವಿಚಾರದಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.




