ಹಾವೇರಿಯಲ್ಲಿ ಜೈನ ಸಮುದಾಯದಿಂದ ದಶಲಕ್ಷಣ ಮಹಾಪರ್ವ ಆಚರಣೆ
ಹಾವೇರಿಯಲ್ಲಿ ದಶಲಕ್ಷಣ ಮಹಾಪರ್ವ: ಅನಂತನಾಥ ಸ್ವಾಮಿ ಪಾಲಕಿ ಉತ್ಸವ
ಹಾವೇರಿ: ನಗರದ ಭಗವಾನ್ ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿ ದಶಲಕ್ಷಣ ಮಹಾಪರ್ವದ ಅಂಗವಾಗಿ ಅನಂತ ನೊಂಪಿ ಕೊನೆಯ ದಿನ ವಿಶೇಷ ಪೂಜಾ ಕಾರ್ಯಕ್ರಮಗಳು ಶನಿವಾರ ಬೆಳಿಗ್ಗೆಯಿಂದ ಜರುಗಿದವು.
ಜಿನಮಂದಿರದ ಪಂಡಿತರಾದ ಶ್ರೇಣಿಕ ಉಪಾಧ್ಯಾಯ ಅವರ ಮಾರ್ಗದರ್ಶನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ದಶಲಕ್ಷಣ ಮಹಾಪರ್ವವನ್ನು ಭಕ್ತಿಭಾವದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪೂಜಾ ಕಾರ್ಯಕ್ರಮದ ಬಳಿಕ ಸಾಯಂಕಾಲ ಶ್ರೀ ಭಗವಾನ್ ಅನಂತನಾಥ ಸ್ವಾಮಿ ಜಿನಬಿಂಬದ ಪಾಲಕಿ ಉತ್ಸವವನ್ನು ಅಷ್ಟಮಂಗಲಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಡಗರ ಹಾಗೂ ಸಂಭ್ರಮದಿಂದ ನಡೆಸಲಾಯಿತು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಶ್ರಾವಕರು ಹಾಗೂ ಶ್ರಾವಕಿಯರು ಕೇಸರಿ ಮತ್ತು ಶ್ವೇತವರ್ಣದ ವಸ್ತ್ರಗಳನ್ನು ಧರಿಸಿ, ಭಗವಂತರ ಜಯಘೋಷಣೆ ಮಾಡುತ್ತ ಸಾಗಿದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಇದೇ ಸಂದರ್ಭದಲ್ಲಿ ಹಾವೇರಿ ಶ್ರೀಮತಿ ವೀಣಾ ಚಂದ್ರನಾಥ ಕಳಸೂರು ಚಾರಿಟೇಬಲ್ ಟ್ರಸ್ಟ್ ವತಿಯಿಂದ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ಜಿಲ್ಲೆಯ ಜೈನ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹಾವೇರಿ ನಗರದ ಶ್ರೀ ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನಗದು ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿನಮಂದಿರದ ಪಂಡಿತರಾದ ಶ್ರೇಣಿಕ ಉಪಾಧ್ಯಾಯ, ಶ್ರೀಮತಿ ವೀಣಾ ಚಂದ್ರನಾಥ ಕಳಸೂರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚಂದ್ರನಾಥ ಕಳಸೂರು ಸೇರಿದಂತೆ ಸಮಾಜದ ಮುಖಂಡರು ಹಾಗೂ ಜೈನ ಸಮುದಾಯದ ಹಲವು ಗಣ್ಯರು ಉಪಸ್ಥಿತರಿದ್ದರು.
