6 Skip to content

ಚರಕ ಹಿಡಿದ ಹಾವೇರಿ ಡಿಸಿ..! ಗಾಂಧೀಜಿ ನೆನೆದು ವಿಶೇಷ ಆಚರಣೆ

*ಗಾಂಧಿ ಪುತ್ಥಳಿಗೆ ಮಾಲಾರ್ಪಣೆ-ಸದ್ಭಾವನಾ ನಡಿಗೆ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

ಹಾವೇರಿ: ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀಜಿ ಈ ಇಬ್ಬರು ಮಹಾನ್ ವ್ಯಕ್ತಿಗಳ ಆಚಾರ-ವಿಚಾರ, ಜೀವನ ಚರಿತ್ರೆ ಇಂದಿಗೂ ಪ್ರಸ್ತುತ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಹೇಳಿದರು

ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾದ ಮಹಾತ್ಮಾಗಾಂಧಿ ಹಾಗೂ ಲಾಲ್‌ಬಹದ್ದೂರ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಚರಕದ ನೂಲು ತೆಗೆಯುವ ಮೂಲಕ ಉದ್ಘಾಟನೆ ನೆರವೇರಿಸಿ, ಉಭಯ ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಗಾಂಧೀಜಿ ಅವರ ಜೀವನ ಹಾಗೂ ಬದುಕಿನ ಆದರ್ಶದಿಂದ ರಾಷ್ಟ್ರಪಿತ ಎಂದು ಕರೆಸಿಕೊಂಡರು. ತತ್ವರಹಿತ ರಾಜಕಾರಣ. ದುಡಿಮೆಯಿಲ್ಲದ ಸಂಪತ್ತು. ಆತ್ಮಸಾಕ್ಷಿಯಿಲ್ಲದ ಸಂತೋಷ, ಚಾರಿತ್ರ್ಯವಿಲ್ಲದ ಶಿಕ್ಷಣ. ನೀತಿಯಿಲ್ಲದ ವ್ಯಾಪಾರ, ಮಾನವೀಯತೆಯಿಲ್ಲದ ವಿಜ್ಞಾನ ಹಾಗೂ ತ್ಯಾಗವಿಲ್ಲದ ಪೂಜೆ ಈ ಏಳು ಪಾಪಗಳನ್ನು ತೊಡೆದುಹಾಕಬೇಕು ಎಂದು ಗಾಂಧೀಜಿ ಅವರು ಹೇಳುತ್ತಿದ್ದರು. ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಸ್ವತಂತ್ರ, ಸಮಾಜ ನಿರ್ಮಾಣ ಅವರ ಆಶಯವಾಗಿತ್ತು ಎಂದರು.

ಗಾಂಧೀಜಿ ಅವರು ಅಹಿಂಸಾ ಹಾಗೂ ಸತ್ಯಾಗ್ರಹದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು. ಗಾಂಧೀಜಿ ಅವರು “ನನ್ನ ಜೀವನವೇ ನನ್ನ ಸಂದೇಶ” ಎಂದು ಹೇಳುತ್ತಿದ್ದರು. ಮನುಷ್ಯ ನಿರ್ಮಾಣ ಮಾಡಿದ ಯಾವುದೇ ಆಯುಧಕ್ಕಿಂತ ಹರಿತವಾದ ಆಯುಧ ಅಹಿಂಸಾ ಮಾರ್ಗ ಎಂದು ಹೇಳುತ್ತಿದ್ದರು. ಸತ್ಯ ಹಾಗೂ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಪಡೆದ ಹಿನ್ನಲೆಯಲ್ಲಿ ವಿಶ್ವ ಭಾರತಕ್ಕೆ ಬಹಳ ಗೌರವ ನೀಡುತ್ತದೆ.ದಲೈಲಾಮಾ, ನೆಲ್ಸನ್ ಮಂಡೇಲಾ ಸೇರಿದಂತೆ ಅನೇಕರು ಗಾಂಧೀಜಿ ಅವರ ಮಾರ್ಗ ಅನುಸರಿಸುತ್ತಿದ್ದರು. ಗಾಂಧೀಜಿ ಅವರು ಸ್ವಚ್ಛತೆಗೆ ಹಾಗೂ ಸ್ವದೇಶಿ ಬಟ್ಟೆಗೆ ಬಹಳ ಆದ್ಯತೆ ನೀಡಿದ್ದರು. ಸ್ವಾವಲಂಬಿ ರಾಷ್ಟ್ರ ಮಾಡಬೇಕು ಎಂಬುದು ಅವರ ಆಶಯವಾಗಿತ್ತು. ದೇಶಕ್ಕೆ ಸ್ವಾತಂತ್ರ್ಯದ ಜತೆಗೆ ಸ್ವಚ್ಛತೆ ಬಹಳ ಮುಖ್ಯವಾಗಿದೆ ಎಂದು ಹೇಳುತ್ತಿದ್ದರು. ಗಾಂಧೀಜಿ ಅವರು ರಾಮರಾಜ್ಯದ ಕನಸು ಕಂಡಿದ್ದರು. ಈ ನಿಟ್ಟಿನಲ್ಲಿ ಇಂದು ಆಡಳಿತವನ್ನು ಗ್ರಾಮ ಮಟ್ಟದಲ್ಲಿ ತೆಗೆದುಕೊಂಡು ಹೋಗಲಾಗಿದೆ ಎಂದರು.

ಇಂದು ಭಯೋತ್ಪಾದನೆ ಹಾಗೂ ಯುದ್ಧ ಭೀತಿಯನ್ನು ಎದುರಿಸಲಾಗುತ್ತಿದೆ. ಇದರಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಶಾಂತಿ ನೆಲೆಸಬೇಕು. ಈ ನಿಟ್ಟಿನಲ್ಲಿ ಗಾಂಧೀಜಿ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಜೀವನ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.

You cannot copy content of this page