ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಕೇಂದ್ರ ಅಧ್ಯಯನ ತಂಡದೊಂದಿಗೆ ಸಚಿವರಾದ ರುದ್ರಪ್ಪ ಲಮಾಣಿ, ಲಕ್ಷ್ಮಣ ಸವದಿ ಮಹತ್ವದ ಚರ್ಚೆ
– ಕಬ್ಬಿನ ಬೆಲೆ ನಿಗದಿ, ತೂಕದ ಪಾರದರ್ಶಕತೆ ಹಾಗೂ ರೈತರಿಗೆ ನ್ಯಾಯಯುತ ಬೆಲೆ ದೊರಕಿಸುವ ಕುರಿತು ಸಮಾಲೋಚನೆ
ಬೆಂಗಳೂರು, ಅಕ್ಟೋಬರ್ 29, 2026: ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಅಧ್ಯಯನಕ್ಕಾಗಿ ಬೆಂಗಳೂರಿಗೆ ಆಗಮಿಸಿರುವ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಧ್ಯಯನ ತಂಡದ ಹಿರಿಯ ಅಧಿಕಾರಿಗಳೊಂದಿಗೆ ರಾಜ್ಯದ ಜವಳಿ ಮತ್ತು ಸಕ್ಕರೆ ಸಚಿವ ಶ್ರೀ ರುದ್ರಪ್ಪ ಲಮಾಣಿ ಹಾಗೂ ಸಹಕಾರ ಸಚಿವ ಶ್ರೀ ಲಕ್ಷ್ಮಣ ಸವದಿ ಅವರು ಮಹತ್ವದ ಚರ್ಚೆ ನಡೆಸಿದರು.

ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರಕಿಸುವುದು, ಕಬ್ಬಿನ ತೂಕದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು, ಸಕ್ಕರೆ ಇಳುವರಿ ಪ್ರಮಾಣದ ವೈಜ್ಞಾನಿಕ ಮೌಲ್ಯಮಾಪನ, ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚ ಹಾಗೂ ರೈತರಿಗೆ ಸಕಾಲದಲ್ಲಿ ಹಣ ಪಾವತಿಸುವುದು ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.

ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ಅಗತ್ಯವಿದ್ದು, ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ಹಾಗೂ ಪಾರದರ್ಶಕ ವ್ಯವಸ್ಥೆ ರೂಪಿಸುವ ಮಹತ್ವದ ಕುರಿತು ಚರ್ಚಿಸಲಾಯಿತು.
ರಾಜ್ಯದ ವಿವಿಧ ಭಾಗಗಳಲ್ಲಿನ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆಗಳ ಕುರಿತು ಕೇಂದ್ರ ಅಧ್ಯಯನ ತಂಡದೊಂದಿಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಾಯಿತು.

ಸಭೆಯಲ್ಲಿ ರೈತ ಪ್ರತಿನಿಧಿಗಳು, ಕೇಂದ್ರ ಅಧ್ಯಯನ ತಂಡದ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.






