ಸತ್ಯನಿಷ್ಠೆಯಿಂದ ಕೆಲಸ ಮಾಡಿದಾಗ ದೇಶದ ಅಭಿವೃದ್ಧಿ ಸಾಧ್ಯ– ನ್ಯಾಯಾಧೀಶರಾದ ದೇವೇಂದ್ರಪ್ಪ ಎನ್.ಬಿರಾದಾರ
ಹಾವೇರಿ : ಅ.30 ಸತ್ಯನಿಷ್ಠೆಯಿಂದ ಕೆಲಸ ಮಾಡಿದಾಗ ಮಾತ್ರ ದೇಶದ ಸಮೃದ್ಧಿ ಸಾಧ್ಯವಾಗುತ್ತದೆ. ಪ್ರಾರಂಭದಲ್ಲಿ ಭ್ರಷ್ಟಾಚಾರ ಈ ಮಟ್ಟಕ್ಕೆ ಇರಲಿಲ್ಲ. ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಂಡು ಪ್ರಾಮಾಣಿಕತೆ, ಸತ್ಯನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿರಾದಾರ ದೇವೇಂದ್ರಪ್ಪ ಎನ್. ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ಲೋಕಾಯುಕ್ತ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಪ್ರಾಮಾಣಿಕತೆಯಿಂದ ಸಮೃದ್ಧಿ” ಘೋಷವಾಕ್ಯದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭ್ರಷ್ಟಾಚಾರ ತಡೆಗಟ್ಟಲು ರೂಪಿಸಿರುವ ಕಾನೂನುಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ಕೇವಲ ಕಾರ್ಯಕ್ರಮವಾಗಿ ಉಳಿಯದೇ ಕಾರ್ಯರೂಪಕ್ಕೆ ತರಬೇಕು ಎಂದರು.







