ಕಬ್ಬಿನ ದರದಲ್ಲಿ ತಾರತಮ್ಯ ಆರೋಪ: ಶಿಗ್ಗಾಂವ್ ರೈತರಿಗೆ ₹2,900, ಹಳಿಯಾಳ–ಕಲಘಟಗಿ ರೈತರಿಗೆ ₹3,100!
ರೈತರ ಹೋರಾಟಕ್ಕೆ ಶಾಸಕ ಯಾಸಿರ್ ಖಾನ್ ಪಠಾಣ್ ಬೆಂಬಲ | ಏಕರೂಪ ದರ ನೀಡದಿದ್ದರೆ ಕಬ್ಬು ಬೆಳೆಗಾರರೊಂದಿಗೆ ನಾನೇ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ
ಶಿಗ್ಗಾಂವ್: ಕಬ್ಬು ಬೆಳೆಗಾರರಿಗೆ ಏಕರೂಪ ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಶಿಗ್ಗಾಂವ್ ಶಾಸಕ ಯಾಸಿರ್ ಖಾನ್ ಪಠಾಣ್ ಬೆಂಬಲ ವ್ಯಕ್ತಪಡಿಸಿದ್ದಾರೆ. ರೈತರ ಬೇಡಿಕೆಯೇ ನಮ್ಮ ಬೇಡಿಕೆಯಾಗಿದ್ದು, ರೈತರಿಗೆ ನ್ಯಾಯ ಸಿಗುವವರೆಗೂ ಅವರ ಪರವಾಗಿ ನಿಲ್ಲುವುದಾಗಿ ತಿಳಿಸಿದ್ದಾರೆ.
ಶಿಗ್ಗಾಂವ್ ಕ್ಷೇತ್ರದ ರೈತರಿಗೆ ಕಬ್ಬಿಗೆ ಪ್ರತಿ ಟನ್‌ಗೆ ₹2,900 ನೀಡಲಾಗುತ್ತಿದ್ದು, ಹಳಿಯಾಳ ಮತ್ತು ಕಲಘಟಗಿ ಭಾಗದ ರೈತರಿಗೆ ₹3,100 ದರ ನೀಡಲಾಗುತ್ತಿದೆ. ಒಂದೇ ಕಾರ್ಖಾನೆಯಿಂದ ಕಬ್ಬು ಖರೀದಿಸುವಾಗ ರೈತರಿಗೆ ಬೇರೆ ಬೇರೆ ದರ ನೀಡುತ್ತಿರುವುದೇಕೆ ಎಂದು ಪ್ರಶ್ನಿಸಿರುವ ಶಾಸಕ ಯಾಸಿರ್ ಖಾನ್ ಪಠಾಣ್, ದರ ನೀಡುವುದಾದರೆ ಎಲ್ಲ ರೈತರಿಗೂ ಸಮಾನ ದರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಶಿಗ್ಗಾಂವ್ ಕ್ಷೇತ್ರದ ನೀರು, ಭೂಮಿ, ವಿದ್ಯುತ್ ಹಾಗೂ ಜನರ ಸಹಕಾರವನ್ನು ಬಳಸಿಕೊಂಡು ನಮ್ಮ ಭಾಗದ ರೈತರಿಗೇ ಕಡಿಮೆ ದರ ನೀಡುತ್ತಿರುವುದು ಸರಿಯಲ್ಲ. ಈ ರೀತಿಯ ತಾರತಮ್ಯದಿಂದ ಸ್ಥಳೀಯ ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈತರ ಬೇಡಿಕೆಯಂತೆ ಎಲ್ಲರಿಗೂ ಒಂದೇ ರೀತಿಯ ಕಬ್ಬಿನ ದರ ನೀಡಬೇಕು. ಇಲ್ಲವಾದಲ್ಲಿ ಕಬ್ಬು ಬೆಳೆಗಾರರೊಂದಿಗೆ ನಾನೇ ಹೋರಾಟಕ್ಕೆ ಇಳಿಯುತ್ತೇನೆ ಎಂದು ಶಾಸಕ ಯಾಸಿರ್ ಖಾನ್ ಪಠಾಣ್ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳು ಸೇರಿದಂತೆ ವಿವಿಧ ಬೆಲೆಗಳನ್ನು ಹೆಚ್ಚಿಸುತ್ತಿದೆ. ಆದರೆ, ಕಬ್ಬು ಬೆಳೆಗಾರರಿಗೆ ಮಾತ್ರ ಸೂಕ್ತ ಹಾಗೂ ಹೆಚ್ಚಿನ ದರ ನೀಡದಿದ್ದರೆ ಅದು ಯಾವ ರೀತಿಯ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಶಿಗ್ಗಾಂವ್ ತಾಲ್ಲೂಕಿನ ಕೋಣನಕೇರಿ ಗ್ರಾಮದ ಸಮೀಪದಲ್ಲಿರುವ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಅವರ ಒಡೆತನದ ಸಕ್ಕರೆ ಕಾರ್ಖಾನೆಯ ಕಬ್ಬಿನ ಖರೀದಿ ದರದ ವಿಚಾರವಾಗಿ ಶಾಸಕ ಯಾಸಿರ್ ಖಾನ್ ಪಠಾಣ್ ಈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.





