6 Skip to content

`ನಾಳೆ ಬರುವೆ’ ಎಂದವ ಇನ್ನೂ ಬಂದಿಲ್ಲ: ವಾರ್ಷಿಕೋತ್ಸವದ ಮನೆಯಲ್ಲಿ ಸೂತಕದ ಛಾಯೆ..

ಎಲ್ಲವೂ ಅಂದುಕೊoಡoತೆ ನಡೆದಿದ್ದರೆ, ಜುಲೈ 22ರ ಸೋಮವಾರ ಅರ್ಜುನ ತನ್ನ ಪತ್ನಿ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಆರು ತಿಂಗಳ ಕಂದಮ್ಮನಿಗೆ ಆಟಿಕೆ ಜೊತೆ ಪತ್ನಿಗೂ ಸೀರೆ ಕೊಡಿಸುವುದಾಗಿ ಆತ ಹೇಳಿಕೊಂಡಿದ್ದ. ಆದರೆ, ಶಿರೂರು ಗುಡ್ಡ ಕುಸಿತದ ಪರಿಣಾಮ ಮದುವೆ ಆದ ಎರಡು ವರ್ಷ ಕಳೆಯುವುದರೊಳಗೆ ಆತನ ಬದುಕು ನರಕವಾಯಿತು…
ಜೊಯಿಡಾದಿಂದ ಕೇರಳಕ್ಕೆ ಲಾರಿ ಚಲಾಯಿಸಿಕೊಂಡು ಹೋಗುತ್ತಿದ್ದ ಅರ್ಜುನ (34 ವರ್ಷ) ಶಿರೂರು ಹೋಟೆಲ್’ಗೆ ತೆರಳುವ ಮುನ್ನ ಪತ್ನಿ ಕೃಷ್ಣಪ್ರಿಯಾ (24 ವರ್ಷ) ಫೋನ್ ಮಾಡಿದ್ದ. ಜುಲೈ 16ರ ಬೆಳಗ್ಗೆ 8.30ಕ್ಕೆ ಆತನ ಫೋನ್ ಸ್ವೀಕರಿಸಿದ್ದ ಕೃಷ್ಣಪ್ರಿಯಾ ಮಗುವಿನ ಕೀಟಲೆಯ ಬಗ್ಗೆ ಹೇಳಿಕೊಂಡಿದ್ದಳು. ಆಗ, ಮಗುವಿಗೆ ಆಟಿಕೆ, ಬಟ್ಟೆ ಕೊಡಿಸುವ ಭರವಸೆಯನ್ನು ಆತ ನೀಡಿದ್ದ. ಚಾಲಕ ವೃತ್ತಿ ಬಿಟ್ಟು ಬೇರೆ ಬದುಕು ನಡೆಸುವ ಬಗ್ಗೆಯೂ ಮಾತನಾಡಿದ್ದ. `ತಂಗಿಯ ಮದುವೆ ಮಾಡಬೇಕು. ಹೊಸ ಮನೆ ಕಟ್ಟಬೇಕು’ ಎಂದು ಸಹ ಭಾವುಕನಾಗಿ ಹೇಳಿಕೊಂಡಿದ್ದ.
ಅರ್ಜುನ ಹಾಗೂ ಕೃಷ್ಣಪ್ರಿಯಾ ಪ್ರೀತಿಸಿ ಮದುವೆ ಆಗಿದ್ದರು. ಅವರ ಪ್ರೀತಿಯ ಬಗ್ಗೆ ಮನೆಯವರಿಗೆ ತಿಳಿಸಿ, ಅವರನ್ನು ಒಪ್ಪಿಸಿ ಆತ ಸಪ್ತಪದಿ ತುಳಿದಿದ್ದ. ಹೀಗಾಗಿ ನಿತ್ಯ ಐದಾರು ಬಾರಿ ಫೋನ್ ಮಾಡಿ ಪತ್ನಿಯ ಜೊತೆ ಮಾತನಾಡುತ್ತಿದ್ದ. ಸಮಯ ಸಿಕ್ಕಾಗಲೆಲ್ಲ ಮಗುವಿನ ಜೊತೆ ಕಾಲ ಕಳೆಯುತ್ತಿದ್ದ. ಕೊನೆಯದಾಗಿ ಮಾತನಾಡಿದಾಗ ಪತ್ನಿ ಆತಂಕ ವ್ಯಕ್ತಪಡಿಸಿದ್ದು, `ನಾಳೆ ಬೆಳಗಾಗುವುದರೊಳಗೆ ಅಲ್ಲಿರುತ್ತೇನೆ’ ಎಂದು ಧೈರ್ಯ ತುಂಬಿದ್ದ.
ಅದಾಗಿ 20 ನಿಮಿಷದ ಒಳಗೆ `ಆತ ಇನ್ನಿಲ್ಲ’ ಎಂಬ ಆಘಾತದ ಸುದ್ದಿ ಕೃಷ್ಣಪ್ರಿಯಾಳ ಕಿವಿಗೆ ಬಿದ್ದಿತ್ತು. ತಕ್ಷಣ ಆಕೆ, ಅರ್ಜುನನಿಗೆ ಫೋನ್ ಮಾಡಿದ್ದಳು. ಆದರೆ, ರಿಂಗಣಿಸಿರಲಿಲ್ಲ. ಪದೇ ಪದೇ ಆಕೆ ಫೋನ್ ಮಾಡುತ್ತಲೇ ಇದ್ದಳು. ಈ ನಡುವೆ ಜುಲೈ 18ರ ಬೆಳಗ್ಗೆ ಒಮ್ಮೆ ಆತನ ಫೋನ್ ರಿಂಗ್ ಆಗಿದ್ದು, `ಆತ ಇನ್ನೂ ಸತ್ತಿಲ್ಲ’ ಎಂದು ಕೃಷ್ಣಪ್ರಿಯಾ ನಂಬಿದ್ದಾಳೆ.
ಆ ನಂಬಿಕೆ ಹುಸಿಯಾಗದಿರಲಿ ಎಂದು ಇಡೀ ಕೇರಳದ ಜನತೆ ಜೊನೆ ಕನ್ನಡಿಗರು ಪ್ರಾರ್ಥಿಸುತ್ತಿದ್ದಾರೆ.

Leave a comment

Leave a Reply

You cannot copy content of this page