ಶಿರಸಿ: ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಮಂಡಿಸಿದ ಬಜೆಟ್ `ವಿಕಸಿತ ಭಾರತಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. `ಕೇಂದ್ರ ಸರ್ಕಾರದ ಈ ಬಜೆಟ್ ದೇಶಪರವಾಗಿಲ್ಲ’ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ ಟೀಕಿಸಿದ್ದಾರೆ.
`ದೇಶದ ರೈತರ, ಮಹಿಳೆಯರ, ಯುವಕರ ಹಾಗೂ ಸರ್ವರ ಏಳಿಗೆಗೆ ಮುಂದಿನ ಐದು ವರ್ಷಗಳಲ್ಲಿ ಮಾಡಬಹುದಾದ ಕೆಲಸಗಳ ಕ್ರಿಯಾ ಯೋಜನೆ ಈ ಬಜೆಟಿನಲ್ಲಿದೆ. ಮಧ್ಯಮ ವರ್ಗದವರಿಗೂ ಹೊರೆಯಾಗದಂತೆ ತೆರಿಗೆಯಲ್ಲಿ ಬದಲಾವಣೆ ಮಾಡಿರುವುದು ಸ್ವಾಗತಾರ್ಹ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಹೇಳಿದ್ದಾರೆ. `ಈ ಬಜೆಟಿನಲ್ಲಿ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ನಿರೀಕ್ಷಿತ ಯೋಜನೆಗಳಾದ ನೀರಾವರಿ, ವಾಯುಮಾನ, ತಾಂತ್ರಿಕ ಸಾರಿಗೆ ಬಗ್ಗೆ ಘೋಷಿಸದಿರುವುದು ವಿಷಾದಕರ’ ಎಂದು ರವೀಂದ್ರ ನಾಯ್ಕ ಹೇಳಿದ್ದಾರೆ.
`ಈ ಬಜೆಟಿನಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ’ ಎಂದು ಕಾಗೇರಿ ಹೇಳಿದ್ದು, `ಕರ್ನಾಟಕದಲ್ಲಿ 17 ಸಂಸದರಿದ್ದರೂ ರಾಜ್ಯಕ್ಕೆ ಸಿಕ್ಕಿದ್ದು ಏನು ಇಲ್ಲ’ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಶೈಲೆಶ ಗಾಂಧಿ ಹೇಳಿದ್ದಾರೆ. `ಯುವಕರಿಗೆ ತರಬೇತಿ ನೀಡಿ ಸ್ವಯಂ ಉದ್ಯೋಗಕ್ಕೆ ಒತ್ತು ನೀಡಲಾಗಿದೆ. ಭವಿಷ್ಯದಲ್ಲಿ ಭಾರತವು ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಹೊಂದಿದ ದೇಶವನ್ನಾಗಿಸುವ ಉದ್ದೇಶದಿಂದ ಈ ಬಜೆಟ್ ಕೂಡಿದೆ’ ಎಂದು ಸಂಸದರು ಸಮರ್ಥಿಸಿಕೊಂಡಿದ್ದಾರೆ. ಆದರೆ, `ಸಾಕಷ್ಟು ಬಾರಿ ಜನಪ್ರತಿನಿಧಿಯಾಗಿ ಅನುಭವ ಇರುವ ಕಾಗೇರಿ ಈಗಲೂ ಕಾಗೆ ಹಾರಿಸುತ್ತಿದ್ದಾರೆ’ ಎಂದು ಎಂದು ಕಾಂಗ್ರೆಸ್ ಜಾಲತಾಣ ವಿಭಾಗ ಅಧ್ಯಕ್ಷ ಪ್ರಸನ್ನ ಶೆಟ್ಟಿ ವ್ಯಂಗ್ಯವಾಡಿದ್ದಾರೆ.




Discussion about this post