ಕಾರವಾರ: ನೆರೆ ಪ್ರವಾಹದ ಪರಿಹಾರ ವಿತರಣೆ, ಹದಗೆಟ್ಟ ರಸ್ತೆ ದುರಸ್ತಿ, ಸರ್ಕಾರಿ ಕಚೇರಿಗಳ ಶುದ್ಧೀಕರಣ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಬುಧವಾರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
`ಚೆಂಡಿಯಾ, ತೋಡೂರು, ಅಮದಳ್ಳಿ, ಅರಗಾ ಮೊದಲಾದ ಕಡೆ ನೆರೆ ಪ್ರವಾಹದಿಂದ ಮನೆಗಳು ಜಲಾವೃತಗೊಂಡಿದೆ. ಇದರಿಂದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಂಕೋಲಾದ ಹಾರವಾಡ, ಗೌಡಕೇರಿ, ಬೊಬ್ರುವಾಡ, ನದಿಬಾಗದಲ್ಲಿ ಸಹ ಇದೇ ಸಮಸ್ಯೆಗಳಿದೆ. ಇದಕ್ಕೆ ಶಾಶ್ವತ ಪರಿಹಾರ ಅಗತ್ಯ’ ಎಂದು ಒತ್ತಾಯಿಸಿದರು.
`ಅಗಸೂರು-ಶಿರಗುಂಜಿ-ಕೊಡ್ಸಣಿ ಮಾರ್ಗ ಹಾಗೂ ಹಿಲ್ಲೂರು-ಮಾದನಗೇರಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ದುರಸ್ಥಿ ಮಾಡಬೇಕು. ಕೊಡ್ಸಣಿ ರಸ್ತೆ ಹಾಗೂ ಗೋಕರ್ಣ ವಡ್ಡಿ ರಸ್ತೆಗಳನ್ನು ಪ್ರಕೃತಿ ವಿಕೋಪದಿಂದ ಹಾನಿಯಾದ ರಸ್ತೆ ಎಂದು ಪರಿಗಣಿಸಿ ಸರ್ವಋತು ರಸ್ತೆಯನ್ನಾಗಿ ಮಾಡಬೇಕು’ ಎಂದು ಆಗ್ರಹಿಸಿದರು. `ಕಾರವಾರ ತಹಶೀಲ್ದಾರ್ ಕಚೇರಿ ಸೇರಿ ಹಲವು ಸರ್ಕಾರಿ ಕಚೇರಿ ಸೋರುತ್ತಿದ್ದು, ಅಧಿಕಾರಿಗಳಿಗೆ ಕೆಲಸ ಮಾಡಲು ಆಗುತ್ತಿಲ್ಲ. ಜನರಿಗೂ ಇದರಿಂದ ಸಮಸ್ಯೆಯಾಗಿದೆ. ಹೀಗಾಗಿ ಅಲ್ಲಿನ ಕಚೇರಿಗಳನ್ನು ನೂತನವಾಗಿ ನಿರ್ಮಾಣಗೊಂಡಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಸ್ಥಳಾಂತರಿಸಬೇಕು’ ಎಂದು ಆಗ್ರಹಿಸಿದರು.
ಗಾಂಧಿ ಮಾರುಕಟ್ಟೆಯಲ್ಲಿ ಮಳಿಗೆಗಳ ನಿರ್ಮಾಣ, ಪ್ರವಾಹ ಸಂತ್ರಸ್ತತರಿಗೆ ನೀಡುವ ನೆರವು ಹೆಚ್ಚಳ, ನಿವೇಶನ ಹಂಚಿಕೆ ಕುರಿತು ಚರ್ಚಿಸಿದರು.
Discussion about this post