ರಾಜ್ಯ ಸರ್ಕಾರದ ಹಗರಣಗಳ ವಿರುದ್ಧ ಬಿಜೆಪಿ ನಡೆಸುತ್ತಿರುವ `ಮೈಸೂರು ಚಲೋ’ ಪಾದಯಾತ್ರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 300ಕ್ಕೂ ಅಧಿಕ ಜನ ಭಾಗವಹಿಸಿದ್ದು, ಯಲ್ಲಾಪುರದ ವಿವಿಧ ಗ್ರಾಮಗಳಿಂದ ಬಂದ 61 ಜನ ಒಟ್ಟು 38ಕಿಮೀ ನಡೆದಿದ್ದಾರೆ.
ಶನಿವಾರ ಬೆಳಗ್ಗೆ ಬೆಂಗಳೂರಿನ ಕೆಂಗೇರಿಯಿoದ ಶುರುವಾದ ಈ ಪಾದಯಾತ್ರೆ 16ಕಿಮೀ ಸಂಚರಿಸಿದ್ದು, ರಾತ್ರಿ ಎಲ್ಲರೂ ಬಿಡದಿಯಲ್ಲಿ ವಾಸ್ತವ್ಯ ಹೂಡಿದರು. ಭಾನುವಾರ ಮತ್ತೆ 22ಕಿಮೀ ಸಂಚರಿಸಿ ರಾಮನಗರ ತಲುಪಿದರು. ಈ ಪಾದಯಾತ್ರೆಯಲ್ಲಿ ವಿವಿಧ ಕ್ಷೇತ್ರದ ಸಂಸದರು, ಶಾಸಕರು ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದು ಸ್ಥಳೀಯ ಕಾರ್ಯಕರ್ತರು ಅವರ ಜೊತೆ ಬೆರೆತರು. ಪಕ್ಷ ಸಂಘಟನೆ ವಿಷಯವಾಗಿ ಚರ್ಚಿಸಿದರು.
ಇನ್ನೂ ಪಾದಯಾತ್ರೆಯಲ್ಲಿ ಭಾಗವಹಿಸಿದ ಉತ್ತರ ಕನ್ನಡ ಜಿಲ್ಲೆಯವರಿಗೆ ಬಿಜೆಪಿ ರಾಜ ಮರ್ಯಾದೆ ನೀಡಿದೆ. ಅಚ್ಚುಕಟ್ಟಾದ ಊಟ ಹಾಗೂ ವಸತಿ ಕಲ್ಪಿಸಿದೆ. ಜೊತೆಗೆ ದಾರಿಯೂದ್ದಕ್ಕೂ ಮನರಂಜನೆಗಾಗಿ ಬಗೆ ಬಗೆಯ ಕಲಾ ಪ್ರದರ್ಶನಗಳನ್ನು ಏರ್ಪಡಿಸಿದೆ. ಶನಿವಾರ ರಾತ್ರಿ ಚಪಾತಿ-ಪುರಿ ಜೊತೆ ಸಿಹಿತಿನಿಸಿನ ಊಟವನ್ನು ಕಾರ್ಯಕರ್ತರಿಗೆ ನೀಡಲಾಗಿದೆ. ಭಾನುವಾರ ಬೆಳಗ್ಗೆ ಇಡ್ಲಿ-ವಡಾ, ಉಪ್ಪಿಟ್ಟು-ದೋಸೆ ಸೇರಿ 10 ಬಗೆಯ ತಿಂಡಿಗಳನ್ನಿರಿಸಲಾಗಿತ್ತು. ಮಧ್ಯಾಹ್ನ ಸಹ ಭಾರೀ ಭೋಜನ ವ್ಯವಸ್ಥೆ ಮಾಡಲಾಗಿತ್ತು. ನಾಳೆ ಬೆಳಗ್ಗೆ ಸಹ ಪಾದಯಾತ್ರೆ ಮುಂದುವರೆಯಲಿದೆ.
Discussion about this post