ಯಲ್ಲಾಪುರ: ಪಟ್ಟಣದ ಅಂಚಿನ ತಟಗಾರ ವಸತಿ ಪ್ರದೇಶದಲ್ಲಿ ಭಾನುವಾರ ಸಂಜೆ ಚಿರತೆ (Leopard) ಕಾಣಿಸಿಕೊಂಡಿದೆ.
ಸಂಜೆ 7.35ರ ವೇಳೆಗೆ ಜೋಗದಮನೆ ಅಂಗಳದಲ್ಲಿ ಚಿರತೆ ಓಡಾಟ ನಡೆಸಿದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಹಿಂದೆ ಸಹ ಸಮೀಪದ ಅರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಚಿರತೆ ಚಲನ-ವಲನ ಸೆರೆಯಾಗಿದ್ದು ಇದೇ ಮೊದಲು. ತಟಗಾರ ಗ್ರಾಮದಲ್ಲಿ ಆಗಾಗ ಚಿರತೆ ಹಸು ಭಕ್ಷಿಸಿದ ನಿದರ್ಶನಗಳಿವೆ. ಯಲ್ಲಾಪುರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶ ಇಡಗುಂದಿ ಅರಣ್ಯ ವಲಯದ ಗಡಿಭಾಗದಲ್ಲಿದೆ. ಪಟ್ಟಣದಿಂದ 4 ಕಿ.ಮೀ ಅಂತರದಲ್ಲಿದೆ.
ಈ ಭಾಗದಲ್ಲಿ ಕಾಡುಹಂದಿ, ಮುಳ್ಳಂದಿ, ಕಾಡುಕೋಣ ಸೇರಿದಂತೆ ವಿವಿಧ ಬಗೆಯ ವನ್ಯಜೀವಿಗಳಿವೆ. ಕಾಡುಹಂದಿ ಹಾಗೂ ಮುಳ್ಳುಹಂದಿ ಕೃಷಿ-ತೋಟಗಾರಿಕಾ ಬೆಳೆ ಹಾನಿ ಮಾಡಿದ್ದು, ಈವರೆಗೆ ವನ್ಯಜೀವಿ ಜನವಸತಿ ಪ್ರದೇಶಕ್ಕೆ ನುಗ್ಗಿದ ನಿದರ್ಶನಗಳಿರಲಿಲ್ಲ. ಚಿರತೆ ಸಹ ಕೊಟ್ಟಿಗೆಗೆ ದಾಳಿ ಮಾಡಿ ಜಾನುವಾರುಗಳನ್ನು ಭಕ್ಷಿಸಿದ್ದು, ಜನ ವಸತಿ ಪ್ರದೇಶಕ್ಕೆ ಲಗ್ಗೆ ಇಟ್ಟಿರಲಿಲ್ಲ.
ನಾಯಿಯನ್ನು ಗುರಿಯಾಗಿರಿಸಿಕೊಂಡು ಮನೆ ಅಂಗಳಕ್ಕೆ ಆಗಮಿಸಿದ ಚಿರತೆ (Leopard) ಕೊನೆ ಕ್ಷಣದಲ್ಲಿ ನಾಯಿಯನ್ನು ಭಕ್ಷಿಸದೇ ಓಡಿದೆ. ತೋಟಗಾರಿಕಾ ಪ್ರದೇಶದಿಂದ ಬಂದ ಈ ವನ್ಯಜೀವಿ ಸಾರ್ವಜನಿಕ ಓಡಾಟದ ರಸ್ತೆ ಮೂಲಕ ಮತ್ತೆ ಕಾಡು ಸೇರಿದೆ. ಚಿರತೆ ಬಂದ ಹಾಗೂ ಹೋದ ಮಣ್ಣಿನ ಪ್ರದೇಶದಲ್ಲಿ ಹೆಜ್ಜೆ ಗುರುತುಗಳಾಗಿವೆ. ಆಹಾರ ಬಿಟ್ಟು ಹೋದ ಕಾರಣ ಚಿರತೆ ಮತ್ತೆ ಬರುವ ಸಾಧ್ಯತೆ ಹೆಚ್ಚಿದೆ.
ಚಿರತೆ ಚಲನ-ವಲನ ಸೆರೆಯಾದ ವಿಡಿಯೋ ಇಲ್ಲಿ ನೋಡಿ..





Discussion about this post