ಅಂಕೋಲಾ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಆದೇಶ ಹೊರಬರುತ್ತಲೇ ಅಧಿಕಾರ ಚುಕ್ಕಾಣಿ ಹಿಡಿಯಲು ಕಿತ್ತಾಟ ಶುರುವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ತಾವೇ ಅಧಿಕಾರ ಹಿಡಿಯಬೇಕು ಎಂದು ಕಸರತ್ತು ನಡೆಸುತ್ತಿದ್ದರೆ, ಆ ಪಕ್ಷದೊಳಗಿನ ಹಲವು ಸದಸ್ಯರು ತಾನೇ ಅಧ್ಯಕ್ಷರಾಗಬೇಕು ಎಂಬ ಕನಸು ಕಂಡಿದ್ದಾರೆ.
ಕಳೆದ ಒಂದೂವರೆ ವರ್ಷಗಳಿಂದ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ ಖಾಲಿ ಇದ್ದು, ಉಪವಿಭಾಗಾಧಿಕಾರಿ ಆಡಳಿತಕ್ಕೆ ಒಳಪಟ್ಟಿತ್ತು. ಇದೀಗ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಘೋಷಣೆಯಾಗಿದೆ. ಹೀಗಾಗಿ ಪೈಪೋಟಿ ಜೋರಾಗಿದೆ. ಎರಡು ಪಕ್ಷದಲ್ಲಿಯೂ ಒಳಜಗಳ ಸಾಕಷ್ಟಿದ್ದು, ಯಾರು ಅಧಿಕಾರದ ಗದ್ದುಗೆ ಏರಬಹುದು ಎಂಬ ಕುತೂಹಲವೂ ಹೆಚ್ಚಿದೆ.
ಎರಡೂ ಪಕ್ಷಗಳಿಗೆ ಅಧಿಕಾರ ಹಿಡಿಯಲು ಪಕ್ಷೇತರರ ಅವಶ್ಯಕತೆಯಿದ್ದು, ಅವರೇ ನಿರ್ಣಾಯಕ ಪಾತ್ರವಹಿಸಲಿದ್ದಾರೆ. ಕಳೆದ ಬಾರಿ ಐವರು ಪಕ್ಷೇತರರಿಗೆ ಗಾಳ ಹಾಕಿ ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿ ಅಧಿಕಾರಕ್ಕೆರಿತ್ತು. ಆದರೆ, ಈ ಬಾರಿ ಒಬ್ಬ ಪಕ್ಷೇತರ ಅಭ್ಯರ್ಥಿ ನಿಧನರಾಗಿದ್ದು, ಉಳಿದ ನಾಲ್ವರಲ್ಲಿ ಯಾರು ಯಾವ ಕಡೆ ಹೋಗುತ್ತಾರೆ ಎನ್ನುವ ಗೊಂದಲ ಮುಂದುವರೆದಿದೆ. ಪಕ್ಷೇತರರು ಬಹುತೇಕ ಬಿಜೆಪಿ ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ.
ಈ ನಡುವೆಯೂ ಕಳೆದ ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದ ಕಾಂಗ್ರೆಸ್ ಈ ಬಾರಿ ಅಧಿಕಾರ ಹಿಡಿಯಲೇ ಬೇಕು ಎನ್ನುವ ಪಟ್ಟು ಹಿಡಿದಿದೆ. ಹೀಗಾಗಿ ಪಕ್ಷೇತರ ಸದಸ್ಯರನ್ನು ತನ್ನಡೆಗೆ ಎಳೆದುಕೊಳ್ಳುವ ಕಸರತ್ತು ನಡೆಸುತ್ತಿದೆ.
ಕಾಂಗ್ರೆಸ್ಸಿಗೆ ಶಾಸಕ – ಬಿಜೆಪಿಗೆ ಸಂಸದರ ಬಲ
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಶಾಸಕರಿಗೆ ಹಾಗೂ ಸಂಸದರಿಗೆ ಮತದಾನ ಮಾಡುವ ಅವಕಾಶಗಳಿದೆ. ಎರಡು ಪಕ್ಷಗಳು ತಲಾ 9 ಸದಸ್ಯರನ್ನು ಹೊಂದಿದೆ. ಶಾಸಕ-ಸಂಸದರ ಮತವಿದ್ದರೂ ಪಕ್ಷೇತರರೇ ಇಲ್ಲಿ ನಿರ್ಣಾಯಕ.
ವಿಶ್ಲೇಷಣಾ ವರದಿ: ಅಕ್ಷಯಕುಮಾರ್ ಎಸ್
Discussion about this post