ಕೃಷಿ ಹಾಗೂ ಕಲಾರಾಧನೆಯ ಮೂಲಕ ನಿರಂತರ ಕ್ರಿಯಾಶೀಲತೆ ಹೊಂದಿದವರು ಮದ್ದಳೆವಾದಕ ನಾಗಪ್ಪ ಕೋಮಾರ.
ತಮ್ಮ ಹುಟ್ಟೂರಾದ ಯಲ್ಲಾಪುರ ತಾಲೂಕಿನ ತಾರಗಾರ ಎಂಬಲ್ಲಿ ಗೋವಿಂದಜ್ಜರಿoದ ತಾಳದ ಅರಿವು ಹಾಗೂ ಖ್ಯಾತ ಚಂಡೆವಾದಕ ನಾಯ್ಕನಕೆರೆ ಮಹಾಬಲೇಶ್ವರರಿಂದ ಮದ್ದಳೆವಾದನದ ಪ್ರಾಥಮಿಕ ತರಬೇತಿಯನ್ನು ಅವರು ಪಡೆದರು. ನಂತರ ಕೆರೆಮನೆ ಶಂಭುಹೆಗಡೆ ನಿರ್ದೇಶನದ ಗುಣವಂತೆ ಕೇಂದ್ರವನ್ನು ಸೇರಿ ಅಲ್ಲಿ ಗುರುಗಳಾಗಿದ್ದ ಹೇರಂಜಾಲು ವೆಂಕಟ್ರಮಣ ಗಾಣಿಗರಿಂದ ಹೆಜ್ಜೆಗಾರಿಕೆ ಮತ್ತು ಇಡಗುಂಜಿ ಕೃಷ್ಣ ಯಾಜಿಯವರಿಂದ ಮದ್ದಳೆಗಾರಿಕೆಯ ಕುರಿತು ಹೆಚ್ಚಿನ ತರಬೇತಿ ಹೊಂದಿದರು. ಮದ್ದಳೆ ವಾದನದಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ ಕಳವಾಡಿ, ಹಾಲಾಡಿ, ಮಂದಾರ್ತಿ ಮುಂತಾದ ವೃತ್ತಿ ಮೇಳಗಳಲ್ಲಿ ಮರವಂತೆ ನರಸಿಂಹ ದಾಸರು, ಕೆ ಪಿಹೆಗಡೆ, ಅಚವೆ ರವೀಂದ್ರ ಭಟ್, ಹೇರಂಜಾಲು ಬಾಲಕೃಷ್ಣ ಗಾಣಿಗ, ಸುನೀಲ ಭಂಡಾರಿ ಮುಂತಾದವರೊಟ್ಟಿಗೆ ಏಳೆಂಟು ವರ್ಷಗಳ ಕಾಲ ಮದ್ದಳೆವಾದಕರಾಗಿ ತಿರುಗಾಟ ನಡೆಸಿದರು.
ಹೆಚ್ಚೆಚ್ಚು ಕಲಿಯಬೇಕು, ವಾದನವಿಭಾಗದಲ್ಲಿ ಮಹತ್ವದ ಸಾಧನೆ ಮಾಡಬೇಕೆಂಬ ಉತ್ಸಾಹದಲ್ಲಿರುವಾಗಲೇ ಅನಿರೀಕ್ಷಿತವಾಗಿ ಒದಗಿಬಂದ ಕೌಟುಂಬಿಕ ಸಮಸ್ಯೆಗಳಿಂದ ನುಣುಚಿಕೊಳ್ಳಲಾಗಲಿಲ್ಲ. ಹೀಗಾಗಿ ಮೇಳದ ತಿರುಗಾಟ ನಿಲ್ಲಿಸಿದರು. ಜೀವನಾಧಾರವಾದ ಕೃಷಿ ಕಾರ್ಯದೊಟ್ಟಿಗೆ ಹವ್ಯಾಸಿ ಕಲಾವಿದನಾಗಿ ಆಟ-ಕೂಟಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಕವಾಳೆ ಗಣಪತಿ ಭಾಗವತರ ಒಡನಾಟದಿಂದ ಮದ್ದಳೆ ವಾದನದ ಆಯಾಮಗಳನ್ನು ಅವರು ಅರಿತಿದ್ದಾರೆ.
ಮಳಗಿಮನೆ ಸುಬ್ರಾಯ ಹೆಗಡೆ ನೇತೃತ್ವದ ಆನಗೋಡ ಯಕ್ಷಗಾನ ಶಾಲೆಯಲ್ಲಿ ಮದ್ದಳೆ ಶಿಕ್ಷಕರಾಗಿ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ. ಸಜ್ಜನ, ನಿಸ್ವಾರ್ಥ ಕಲಾರಾಧಕ, ನೇರನಡೆನುಡಿಯ ನಾಗಪ್ಪಣ್ಣ ಪ್ರಸ್ತುತ ಆಸಕ್ತ ಯುವ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಾರೆ.
– ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ, ಯಲ್ಲಾಪುರ





Discussion about this post