ಕಿತ್ತು ತಿನ್ನುವ ಬಡತನ, ಪುತ್ರನ ಮರಣ ಶೋಕ, ಇಬ್ಬರು ಅಂಗವಿಕಲ ಮಕ್ಕಳ ಆರೈಕೆ, ಬದುಕು ಕಟ್ಟಿಕೊಡುವ ದೋಣಿಗೆ ನೀರು ತುಂಬುವ ಕೆಲಸ ಎಲ್ಲವನ್ನೂ ಮರೆತು ಶಿರೂರು ( Shiruru ) ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿರುವ ಈಶ್ವರ ಮಲ್ಪೆ ಅವರಿಗೆ ಈವರೆಗೂ ಸರ್ಕಾರದಿಂದ 1 ರೂ ಸಹ ಪಾವತಿ ಆಗಿಲ್ಲ. ಕಾನೂನು ತೊಡಕಿನ ಕಾರಣ ಅವರಿಗೆ ಸರ್ಕಾರ ನೆರವು ನೀಡುವ ಸಾಧ್ಯತೆಗಳು ಇಲ್ಲ. ಭಾರತೀಯ ನೌಕಾಪಡೆ, ಮಿಲಟರಿ ಪಡೆ, ತಟರಕ್ಷಕ ಪಡೆ, NDRF, SDRF’ಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಅರ್ಜುನನ ಲಾರಿ ಪತ್ತೆ ಹಚ್ಚಿದ ಈಶ್ವರ ಮಲ್ಪೆಗೆ ಈವರೆಗೆ ಒಂದು ಸನ್ಮಾನವನ್ನು ಸಹ ಮಾಡಿದವರಿಲ್ಲ!
ದುರಂತದಲ್ಲಿ ಕಣ್ಮರೆಯಾದ ಜಗನ್ನಾಥ ನಾಯ್ಕ ಅವರ ಮಕ್ಕಳು ಅಳುವ ಶಬ್ದ ಕೇಳಲಾಗದೇ ಈ ಕಾರ್ಯಾಚರಣೆಗೆ ಬಂದ ಅವರ ಬಳಿ ಊಟ-ತಿಂಡಿಗೆ ಸಹ ಕಾಸಿರಲಿಲ್ಲ. ಮಲ್ಪೆಯಿಂದ ಶಿರೂರಿಗೆ ಬರಲು ಅವರ ಆಂಬುಲೆನ್ಸಿಗೆ 4500 ರೂ ಡೀಸೆಲ್ ವೆಚ್ಚವಾಗಿದ್ದು ಅದನ್ನು ಪಾವತಿಸಿದವರಿರಲಿಲ್ಲ. ರಕ್ಷಣಾ ಕಾರ್ಯಾಚರಣೆಗಾಗಿ ಉತ್ತರ ಕನ್ನಡ ಜಿಲ್ಲೆಗೆ ಬಂದ ಅವರಿಗೆ ಮೊದಲ 3 ದಿನ ವಸತಿಗೂ ವ್ಯವಸ್ಥೆ ಆಗಿರಲಿಲ್ಲ. ಎರಡು ದಿನ ಆಂಬುಲೆನ್ಸ್’ನಲ್ಲಿ ರಾತ್ರಿ ಕಳೆದ ಅವರ ತಂಡ ಮೂರನೇ ದಿನ ಬೇಲೆಕೆರೆಯ ಮೀನುಗಾರರ ಮನೆಯಲ್ಲಿ ವಸತಿ ಹೂಡಿದ್ದರು. ಅದಾದ ನಂತರ ಪ್ರವಾಸಿ ಮಂದಿರದಲ್ಲಿ ಅವರಿಗೆ ವಸತಿ ಸಿಕ್ಕಿದ್ದು, ಊಟ-ತಿಂಡಿ ಸಿಗದೇ ಉಪವಾಸದಲ್ಲಿದ್ದರು.
ಈ ಬಗ್ಗೆ ಅರಿತ `S News ಡಿಜಿಟಲ್ `ಕಿರು ಕಾಣಿಕೆ’ ಸಂದಾಯ ಮಾಡಿದ್ದು, ಅವರ ಸಮಸ್ಯೆಗಳ ಬಗ್ಗೆ ಎರಡು ಬಾರಿ ವರದಿ ಪ್ರಸಾರ ಮಾಡಿದೆ. ಇದರ ಪರಿಣಾಮ ಈಶ್ವರ ಮಲ್ಪೆ ಅವರಿಗೆ ಸುಮಾರು 40 ಸಾವಿರ ರೂ ಹಣವನ್ನು ನಮ್ಮ ಓದುಗರು ನೇರವಾಗಿ ಪಾವತಿಸಿದ್ದಾರೆ. 1 ರೂ ನೆರವು ನೀಡಿದರೂ ಅವರ ವ್ಯಾಪಾರ-ವಹಿವಾಟುಗಳ ಬಗ್ಗೆ ಜಾಹೀರಾತು ಪ್ರಕಟಿಸುವುದಾಗಿ `S News ಡಿಜಿಟಲ್’ ಘೋಷಿಸಿದ್ದು, ದಾನಿಗಳು ಯಾರೂ ಪ್ರಚಾರ ಬಯಸಿಲ್ಲ. ಹಣ ಪಾವತಿಸಿದವರ ಬಹುತೇಕರ ಹೆಸರು ಯಾರಿಗೂ ಗೊತ್ತಿಲ್ಲ. ಕನಿಷ್ಟ 5 ರೂಪಾಯಿಯಿಂದ ಹಿಡಿದು 5 ಸಾವಿರ ರೂಪಾಯಿವರೆಗೆ ಪಾವತಿಸಿದವರಿದ್ದಾರೆ. ಶಿರಸಿಯ ಪುಟ್ಟ ಬಾಲಕನೊಬ್ಬ ತನ್ನ ಹುಟ್ಟುಹಬ್ಬಕ್ಕೆ ನೀಡಿದ್ದ 1 ಸಾವಿರ ರೂ ಪಾವತಿಸಿದ್ದು, ಆತನಿಂದ ಪ್ರೇರಣೆಗೊಳಗಾದ ಪಾಲಕರು ಸಹ ಮತ್ತೆ 1 ಸಾವಿರ ರೂ ಪಾವತಿಸಿರುವುದು ಮಾದರಿ. ಈ ಎಲ್ಲಾ ಮೊತ್ತವನ್ನು `ದೇವರ ಪ್ರಸಾದ’ ಎಂದು ಭಾವಿಸಿ ಈಶ್ವರ ಮಲ್ಪೆ ಅವರು ಸ್ವೀಕರಿಸಿದ್ದು, ದೇವರ ಪ್ರಸಾದವನ್ನು ಎಲ್ಲಡೆ ಹಂಚುವ0ತೆ ಈ ಹಣದಲ್ಲಿ 20 ಸಾವಿರ ರೂಪಾಯಿಯನ್ನು ದುರಂತದಲ್ಲಿ ಸಾವನಪ್ಪಿದ ಜಗನ್ನಾಥ ನಾಯ್ಕ ಹಾಗೂ ಲೋಕೇಶ್ ನಾಯ್ಕ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಜಗನ್ನಾಥ ಹಾಗೂ ಲೋಕೇಶ್ ಕುಟುಂಬಕ್ಕೆ ಈಶ್ವರ ಮಲ್ಪೆ ನೆರವು ನೀಡುವ ವಿಡಿಯೋ ಯೂಟೂಬ್ ಲೈವ್ ಆಗಿದ್ದರಿಂದ ಅದರಿಂದ ಪ್ರೇರಣೆಗೊಂಡು ಸಂತ್ರಸ್ತರ ಕುಟುಂಬಗಳಿಗೆ ಇತರೆ ದಾನಿಗಳಿಂದ ದೊರೆತ ಆರ್ಥಿಕ ನೆರವು 2 ಲಕ್ಷ ರೂಪಾಯಿಗೂ ಅಧಿಕ. ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ ಈಶ್ವರ ಮಲ್ಪೆ ಅವರೇ `ತಮಗೆ ಕಷ್ಟವಿದೆ. ಸಹಾಯ ಮಾಡಿ’ ಎಂದು ಒಂದು ಮನವಿ ಮಾಡಿದರೆ ಒಂದೇ ದಿನದಲ್ಲಿ ಲಕ್ಷಕ್ಕೂ ಅಧಿಕ ಆರ್ಥಿಕ ನೆರವು ಹರಿದು ಬರಲಿದೆ. ಆದರೆ, ಅವರು ಯಾರಲ್ಲಿಯೂ ಏನನ್ನು ಬೇಡುವವರಲ್ಲ. ಯಾರ ಬಗ್ಗೆಯೂ ದೂರುವವರಲ್ಲ. ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುವವರಲ್ಲ!
ನೀವೆಲ್ಲರೂ ಹಣ ನೀಡಿದ್ದು, ಈಶ್ವರ ಮಲ್ಪೆ ಅವರಿಗೆ ಆದರೂ ಅದರಲ್ಲಿನ ಅರ್ಧ ಭಾಗ ಶಿರೂರು ದುರಂತದಲ್ಲಿ ಸಾವನಪ್ಪಿದ ಜಗನ್ನಾಥ ನಾಯ್ಕ ಹಾಗೂ ಲೋಕೇಶ್ ಕುಟುಂಬಕ್ಕೆ ಸೇರಿದೆ. ಜಗನ್ನಾಥ ಅವರ ಸಾವಿನ ಜೊತೆ ಅವರ ಮನೆ ಸಹ ಬಿರುಕು ಮೂಡಿದೆ. ಮನೆಯ ಗೋಡೆಗಳು ಬೀಳುವ ಹಂತದಲ್ಲಿದ್ದು, ಮಾಡು ಸೋರುತ್ತಿದೆ. ಸಾವನಪ್ಪಿದವರನ್ನು ಬದುಕಿಸಿಕೊಡಲು ಆಗದಿದ್ದರೂ ಎಲ್ಲವನ್ನು ಕಳೆದುಕೊಂಡವರಿಗೆ ಮನೆ ನಿರ್ಮಾಣಕ್ಕಾದರೂ ಈ ಹಣ ನೆರವಾಗಲಿದೆ. ಇದೀಗ ಅರ್ಜುನನ ಕುಟುಂಬಕ್ಕೆ ನೆರವು ನೀಡಲು ಕೇರಳಕ್ಕೆ ಹೊರಟಿರುವ ಈಶ್ವರ ಮಲ್ಪೆ ಇನ್ನೆರಡು ದಿನದಲ್ಲಿ ಮತ್ತೆ ಶಿರೂರಿಗೆ ಆಗಮಿಸಿ ಶವ ಹುಡುಕಾಟದ ಕೆಲಸ ಮಾಡಲಿದ್ದಾರೆ.
ಭಾನುವಾರ ರಾತ್ರಿ 12 ಗಂಟೆ ಆಸುಪಾಸಿಗೆ ಈಶ್ವರ ಮಲ್ಪೆ `S News ಡಿಜಿಟಲ್’ಗೆ ವಿಡಿಯೋ ಸಂದೇಶ ರವಾನಿಸಿದ್ದು, ಇದನ್ನು ಇಲ್ಲಿ ನೋಡಿ..
`S News ಡಿಜಿಟಲ್’ ಪ್ರಕಟಿಸಿದ್ದ ವರದಿ ಇಲ್ಲಿ ನೋಡಿ..
Ishwar malpe | ಸಾವಿರಾರು ಶವ ತೆಗೆದ ಸಾಹಸಿ.. ಈತನ ಬದುಕು ಮಾತ್ರ ನರಕ!




Discussion about this post