ತಾಳಮದ್ದಲೆಯ ಅರ್ಥಗಾರಿಕೆ ಹಾಗೂ ನಾಟಕ ಪಾತ್ರಗಳ ಮೂಲಕ ಕಲಾ ಸೇವೆ (Yakshagana) ಮಾಡುತ್ತಿರುವವರು ಮಲವಳ್ಳಿ ಬೇಣದಗುಳೆಯ ಕೋಗಿಲ್ ಗಣಪತಿ ಭಟ್.
ಸಣ್ಣ ವಯಸ್ಸಿನಲ್ಲಿಯೇ ರಾಮಾಯಣ, ಮಹಾಭಾರತ, ಭಾಗವತಗಳನ್ನು ಆಸಕ್ತಿಯಿಂದ ಓದಿಕೊಂಡಿದ್ದ ಗಣಪತಿ ಭಟ್ಟರು ಯಕ್ಷಗಾನ (Yakshagana) ತಾಳಮದ್ದಳೆಯಿಂದ ಆಕರ್ಷಿತರಾಗಿ ಅರ್ಥ ಹೇಳಲು ಪ್ರಾರಂಭಿಸಿದರು. ಅವರು ಪ್ರಥಮವಾಗಿ ಹೇಳಿದ್ದು ಕೃಷ್ಣ ಸಂಧಾನದ ದ್ರೌಪದಿಯ ಅರ್ಥ. ವೆಂಕಟ್ರಮಣ ಭಟ್ ಬಾರೆ ಮತ್ತು ಚಾವಡಿ ಗೋಪಾಲ ಹೆಗಡೆಯವರ ಮಾರ್ಗದರ್ಶನದಲ್ಲಿ ಕಲೆಯಲ್ಲಿ ಮುಂದುವರಿದು ಸ್ಥಳೀಯ ತಾಳಮದ್ದಳೆಗಳಲ್ಲಿ ನಿರಂತರವಾಗಿ ಭಾಗವಹಿಸಿ ಅನುಭವ ಸಂಪಾದಿಸಿದರು.
ಮೋಹಿನಿ, ಸುಗರ್ಭೆ, ಕೈಕೇಯಿ, ದ್ರೌಪದಿ, ಅಂಬೆ ಮುಂತಾದ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ. ಮಹಿಳಾ ಪಾತ್ರಗನ್ನು ಹೆಚ್ಚಾಗಿ ನಿರ್ವಹಿಸಿರುವ ಗಣಪತಿ ಭಟ್ ಆ ಪಾತ್ರಕ್ಕೆ ಹೊಂದಿಕೊಳ್ಳುವ ಸ್ವರ, ಭಾವನಾತ್ಮಕವಾಗಿ ಪಾತ್ರದ ಔಚಿತ್ಯವರಿತು ಆಡುವ ಮಾತುಗಳಿಂದ ಪ್ರೇಕ್ಷಕರ ಮನಗೆದಿದ್ದಾರೆ. ಬಾಳಂತನಪಾಲ ನಾರಾಯಣ ಗಾಂವ್ಕಾರ, ಗೋಡೆಪಾಲ ನಾರಾಯಣ ಗಾಂವ್ಕಾರ, ವೆಂಕಟ್ರಮಣಭಟ್ ಬಾರೆ, ಚಾವಡಿ ಗೋಪಾಲ ಹೆಗಡೆ, ದಿವಂಗತ ಮೂಲೆಮನೆ ಮಹಾಬಲೇಶ್ವರ ಗಾಂವ್ಕಾರ ಮುಂತಾದವರ ಸಹಕಾರ, ಪ್ರೋತ್ಸಾಹ, ಮಾರ್ಗದರ್ಶನವನ್ನು ಅವರು ಸದಾ ನೆನೆಯುತ್ತಾರೆ.
ಯಕ್ಷಗಾನ ಮಾತ್ರವಲ್ಲ ನಾಟಕ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಹೆಸರು ಮಾಡಿದ್ದಾರೆ. ಎಸ್.ಎನ್ ಗಾಂವ್ಕಾರ ಬೆಳ್ಳಿಪಾಲ ಮತ್ತು ಎಸ್ .ಆರ್ ಭಟ್ ರಾಂಭಟ್ರಮನೆ ಅವರ ನಿರ್ದೇಶನದಲ್ಲಿ ಮಲವಳ್ಳಿಯಲ್ಲಿ ಆಯೋಜನೆಗೊಳ್ಳುತ್ತಿದ್ದ ನಾಟಕಗಳಲ್ಲಿ ಸತತ 14 ವರ್ಷ ಪಾತ್ರ ಮಾಡಿದ್ದಾರೆ. ಅಲ್ಲಿಯೂ ಹೆಚ್ಚಾಗಿ ಮಾಡಿದ್ದು ಮಹಿಳಾ ವೇಷ. ಕೆಲವು ನಾಟಕಗಳಲ್ಲಿ ಹಾಸ್ಯಪಾತ್ರವನ್ನೂ ನಿರ್ವಹಿಸಿದ್ದಾರೆ. ಬಾಸಿಂಗ ಬಲ, ಅತ್ತೆಸೊಸೆ, ರತ್ನಮಾಂಗಲ್ಯ, ಮಲಮಗಳು, ಅಣ್ಣತಮ್ಮ, ದಸರಾ, ಕಾರಸ್ಥಾನ ಮುಂತಾದವು ಇವರು ಪಾತ್ರ ನಿರ್ವಹಿಸಿದ ನಾಟಕಗಳು.
ಯಲ್ಲಾಪುರ ತಾಲೂಕಿನ ಬೇಣದಗುಳೆ ಗ್ರಾಮದ ಕೋಗಿಲ್’ನಲ್ಲಿ ವಾಸವಿರುವ ಭಟ್ಟರು ಉತ್ತಮ ಕೃಷಿಕರೂ ಹೌದು. ಇವರ ಕಿರಿಯ ಮಗ ಸದಾಶಿವ ಭಟ್ ಮಲವಳ್ಳಿ ಯಕ್ಷಗಾನದಲ್ಲಿ ಉತ್ತಮ ವೇಷಧಾರಿಯಾಗಿ ಹೆಸರು ಮಾಡಿದ್ದಾರೆ. ಪ್ರಸ್ತುತ ಕೆರೆಮನೆ ಮೇಳದಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ
Discussion about this post