ನಾಟಿ ವೈದ್ಯರಾಗಿರುವ ನಾರಾಯಣ ಗೌಡ ನಾಟಕಗಳಲ್ಲಿ ಪಾತ್ರ ನಿಭಾಯಿಸುವ ಜೊತೆ ಯಕ್ಷಗಾನವನ್ನು ಕುಣಿಯುತ್ತಾರೆ. ಮಣ್ಣಿನ ವಿಗ್ರಹ ರಚನೆ, ಚಿತ್ರಕಲೆ ಅಂದರೂ ಅವರಿಗೆ ಅಪಾರ ಆಸಕ್ತಿ!
ಯಲ್ಲಾಪುರ ತಾಲೂಕಿನ ಗೇರಾಳದವರಾದ ನಾರಾಯಣ ಗೌಡ ಓದಿದ್ದು 4ನೇ ತರಗತಿ. ಆದರೆ, ಕಾಡುಸೊಪ್ಪಿನ ವಿಷಯದಲ್ಲಿ ಅವರಿಗೆ ಇರುವ ಜ್ಞಾನ ತಜ್ಞ ವೈದ್ಯರಿಗೂ ಇಲ್ಲ. ಇದೇ ಆಧಾರದಲ್ಲಿ ಗಿಡಮೂಲಿಕೆ ಔಷಧಿ ನೀಡುವ ಅವರು ಕಲಾಪ್ರೇಮಿಯೂ ಹೌದು. ಬಗರಿಗದ್ದೆ, ಶಿವಪುರ, ಉಳವಿ, ಹಳವಳ್ಳಿ, ದೇವಕಾರ ಭಾಗಗಳಿಗೆ ಸಂಚರಿಸಿ ಅವರು ಯಕ್ಷಗಾನ ಪ್ರದರ್ಶಿಸಿದ್ದಾರೆ. ವಿವಿಧ ಊರುಗಳಲ್ಲಿ ನಾಟಕ ಪಾತ್ರ ನಿಭಾಯಿಸಿದ್ದಾರೆ. ನಾರಾಯಣ ಗೌಡರ ತಂದೆ, ಚಿಕ್ಕಪ್ಪ, ದೊಡ್ಡಪ್ಪ ಎಲ್ಲರೂ ಯಕ್ಷಗಾನ ಕಲಾವಿದರಾಗಿದ್ದರು. ಹೀಗಾಗಿ ನಿತ್ಯ ಸಂಜೆ ಅವರ ಮನೆಯಲ್ಲಿ ಯಕ್ಷಗಾನ ಜಾಗರಣೆ ನಡೆಯುತ್ತಿತ್ತು. ನಾರಾಯಣ ಗೌಡರು ಯಕ್ಷರಂಗ ಪ್ರವೇಶಿಸಲು ಇದೇ ಪ್ರೇರಣೆ.
ನಾರಾಯಣ ಗೌಡರು ಬಾಲ್ಯದಲ್ಲಿಯೇ ತಾಳ, ಮೃದಂಗ ಹಿಡಿದು ಅಭ್ಯಾಸದಲ್ಲಿ ತೊಡಗುತ್ತಿದ್ದರು. ಜೊತೆಗೆ ಸ್ನೇಹಿತರು ಜೊತೆಯಾಗುತ್ತಿದ್ದರು. 20ನೇ ವಯಸ್ಸಿನಲ್ಲಿ ಖ್ಯಾತ ಭಾಗವತರಾದ ಧೂಪದಮನೆ ರಾಮ ಭಾಗ್ವತ್ ಅವರಲ್ಲಿ ಯಕ್ಷಗಾನ ಅಭ್ಯಾಸ ಮಾಡಿದರು. ಅವರ ಒಡನಾಟದಿಂದ ಯಕ್ಷಗಾನದಲ್ಲಿ ಪಾತ್ರ ಮಾಡುವ ಅವಕಾಶ ಅರೆಸಿ ಬಂದಿತು. `ರಾಮ ಭಾಗ್ವತ್ ಅವರ ಆಶೀರ್ವಾದದ ಫಲವೇ ನಾನಿಂದು ಕಲೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು’ ಎಂದು ಗುರುವನ್ನು ಅವರು ಸದಾ ನೆನೆಯುತ್ತಾರೆ.
ಸಂಪೂರ್ಣವಾಗಿ ಮನೆ ಜವಾಬ್ದಾರಿವಹಿಸಿಕೊಂಡ ನಂತರ ಮೊದಲಿನ ಹಾಗೇ ಕುಣಿಯಲು ಅವರಿಗೆ ಆಗಲಿಲ್ಲ. ಆದರು, ಕಲಾವಿದರಾದ ದುಂಡಿ, ಆರ್.ಎಸ್ ಹೆಗಡೆ, ಸುಬ್ರಾಯ ಭಟ್ ಶಿವಪುರ, ವಿಶ್ವೇಶ್ವರ ಭಟ್ ನೆಲೆಪಾಲ, ಜೈರಾಮ್ ಶೆಟ್ಟಿ ಕಳಚೆ ಅವರ ಜೊತೆಗಿನ ರಂಗಸ್ಥಳದ ಒಡನಾಡದ ನೆನಪು ಅವರನ್ನು ಬಿಟ್ಟಿಲ್ಲ. ಮಹಿಳಾ ಪಾತ್ರಗಳ ಜೊತೆ ಹಾಸ್ಯಪಾತ್ರದಲ್ಲಿಯೂ ಹೆಸರು ಮಾಡಿದ ಅಪರೂಪದ ಕಲಾವಿದರಾಗದ್ದ ನಾಟಕ ರಂಗದಲ್ಲೂ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಅವರು ಇದೀಗ ಮನೆಯಲ್ಲಿ ನಾಟಿ ಔಷಧಿ ನೀಡುತ್ತಾರೆ. ಯಕ್ಷಗಾನದ ಬಗ್ಗೆ ತಾಸುಗಳ ಕಾಲ ಮಾತನಾಡುತ್ತಾರೆ. ಸುಮಾರು 36 ಬಗೆಯ ರೋಗಗಳಿಗೆ ಅವರಲ್ಲಿ ಔಷಧವಿದೆ. 1990ರಲ್ಲಿಯೇ ಚಿತ್ರಕಲೆ ವಿಷಯವಾಗಿ ಕೇಂದ್ರ ಸರ್ಕಾರದ ಪ್ರಶಸ್ತಿಯನ್ನು ಅವರು ಪಡೆದಿದ್ದಾರೆ. ಪ್ರಸ್ತುತ ಕರ್ಕಿನಬೈಲ್ ವೀರಾಂಜನೇಯ ಹವ್ಯಾಸಿ ಯಕ್ಷ ಕಲಾ ಬಳಗದ ಮಾರ್ಗದರ್ಶಕರಾಗಿ ಕಾರ್ಯಕ್ರಮ ಸಂಘಟನೆಯನ್ನು ಮಾಡುತ್ತಾರೆ. ಸ್ಥಳೀಯವಾಗಿರುವ ಹಾಸ್ಯ ಕಾರ್ಯಕ್ರಮಗಳಲ್ಲಿಯೂ ಅವರ ಹಾಜರಾತಿ ಕಡ್ಡಾಯ!
ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ