ಶಿರಸಿ: ಅರಣ್ಯ ಅತಿಕ್ರಮಣ ಹೋರಾಟಗಾರ ರವೀಂದ್ರ ನಾಯ್ಕ ಅವರಿಗೆ ಚುನಾವಣಾ ಟಿಕೆಟ್ ಕೊಡಬೇಕು ಎಂದು ಅನೇಕರು ರಾಜಕೀಯ ವರಿಷ್ಠರಿಗೆ ಆಗ್ರಹಿಸಿದ್ದರು. ಆದರೆ, `ರವೀಂದ್ರ ನಾಯ್ಕರ ಬಳಿ ದುಡ್ಡಿಲ್ಲ’ ಎಂದು ನಾಯಕರು ಹೇಳಿದ್ದರು. ಇದೇ ಕಾರಣದಿಂದ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ!
ಈ ವಿಷಯ ಶಿರಸಿಯ ಗುರುವಾರ ಮಾರಿಕಾಂಬ ಕಲ್ಯಾಣ ಮಂಟಪದಲ್ಲಿ ನಡೆದ ಅರಣ್ಯ ಅತಿಕ್ರಮಣದಾರರ ಸಭೆಯಲ್ಲಿ ಬಹಿರಂಗವಾಗಿದೆ. ಸ್ವತಃ ರವೀಂದ್ರ ನಾಯ್ಕ ಅವರು ಈ ವಿಷಯವನ್ನು ನೆರೆದಿದ್ದವರ ಮುಂದೆ ಹೇಳಿದ್ದು, `ನನ್ನ ಬಳಿ ಹಣ ಇಲ್ಲದಿರಬಹುದು. ಆದರೆ, ನಿಮ್ಮಂಥ ಜನ ನನ್ನೊಂದಿಗಿದ್ದಾರೆ’ ಎನ್ನುತ್ತ ಭಾವುಕರಾದರು. `ಜನರ ಒತ್ತಾಯಕ್ಕೆ ಮಣಿದು ನಾನು ನನ್ನ ಸಾಮರ್ಥ್ಯದ ಆಧಾರದಲ್ಲಿ ಟಿಕೆಟ್ ಕೇಳಿದ್ದೆ. ಆದರೆ, ಚುನಾವಣೆಗೆ ಖರ್ಚು ಮಾಡುವಷ್ಟು ಹಣ ಇಲ್ಲ ಎಂದು ಟಿಕೆಟ್ ಕೊಡಲಿಲ್ಲ. ನನ್ನೊಂದಿಗೆ ಅರಣ್ಯ ಅತಿಕ್ರಮಣದಾರರಿದ್ದು, ದುಡ್ಡು ಇಲ್ಲವೆಂದು ಅಪಾದನೆ ಮಾಡಿದವರಿಗೆ ಸೂಕ್ತ ಸಮಯದಲ್ಲಿ ಸೂಕ್ತ ವೇದಿಕೆಯಲ್ಲಿ ಉತ್ತರಿಸುವೆ’ ಎಂದವರು ಮಾರ್ಮಿಕವಾಗಿ ನುಡಿದರು.
`ಹೋರಾಟವಿಲ್ಲದೇ ನ್ಯಾಯವಿಲ್ಲ. ದೇಶದ ಎಲ್ಲಾ ಭೂಮಿ ಹಕ್ಕಿನ ಫಲಶೃತಿಯಲ್ಲಿ ಹೋರಾಟದ ಇತಿಹಾಸವಿದೆ. ಅರಣ್ಯ ಭೂಮಿ ಹಕ್ಕು ಪ್ರಾಪ್ತವಾಗುವವರೆಗೂ, ಹೋರಾಟದ ಗರ್ಜನೆ ನಿಲ್ಲಿಸದ್ದೀರಿ’ ಎಂದು ಈ ವೇಳೆ ಎಂದು ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಅವರು ಅರಣ್ಯವಾಸಿಗಳಿಗೆ ಕರೆ ನೀಡಿದರು. `ಮಲಗಿರುವ ಸರ್ಕಾರವನ್ನು ಜನ ಎದ್ದೇಳಿಸಬೇಕು’ ಎಂದು ಕಾಗೋಡು ತಿಮ್ಮಪ್ಪ ಕರೆ ನೀಡಿದರು.
`ಭೂಮಿ ಮಾನವನ ಸಂವಿಧಾನ ಬದ್ಧ ಹಕ್ಕು. ಕಾನೂನು ಬಂದರೂ ಮಂಜೂರಿಯಲ್ಲಿ ವಿಫಲರಾಗಿದ್ದೇವೆ. ಜನಪ್ರತಿನಿಧಿಗಳ ನಿರಾಸಕ್ತಿಗೆ ಇದಕ್ಕೆ ಕಾರಣವಾಗಿದೆ. ಹೋರಾಟದೊಂದಿಗೆ ಕಾನೂನು ಜಾಗೃತವನ್ನು ಮೂಡಿಸಿ’ ಎಂದವರು ಹೇಳಿದರು.
ಹೋರಾಟಗಾರ ಜೆ ಎಮ್ ಶೆಟ್ಟಿ ಮಾತನಾಡಿ `ಮುಂದಿನ ದಿನಗಳಲ್ಲಿ ಭೂಮಿ ಹಕ್ಕಿಗಾಗಿ ಕಾನೂನು ಹೋರಾಟ ತೀವ್ರಗೊಳಿಸಲಾಗುವುದು’ ಎಂದರು. ಸಂಘಟನೆಯ ರಾಜ್ಯ ಸಂಚಾಲಕಿ ರಂಜಿತಾ ರವೀಂದ್ರ ಉಪಸ್ಥಿತರಿದ್ದರು.
ಪ್ರಮುಖರಾದ ಪಾಡುರಂಗ ನಾಯ್ಕ ಬೆಳೆಕೆ, ಸದಾನಂದ ತಿಗಡಿ, ರಮಾನಂದ ನಾಯ್ಕ, ಮಾಬ್ಲೇಶ್ವರ್ ನಾಯ್ಕ ಬೇಡ್ಕಣಿ, ಆನಂದ ನಾಯ್ಕ, ರಾಘವೇಂದ್ರ ಕವಂಚೂರು ಮಾತನಾಡಿದ್ದರು. ವೇದಿಕೆಯ ಮೇಲೆ ರಾಜು ನರೇಬೈಲ್, ದೇವರಾಜ ಗೊಂಡ ಭಟ್ಕಳ, ಇಬ್ರಾಹಿಂ ಗೌಡಳ್ಳಿ, ಭೀಮಶಿ ವಾಲ್ಮಿಕಿ, ನೇಹರು ನಾಯ್ಕ, ಎಮ್ ಆರ್ ನಾಯ್ಕ, ಮಹೇಂದ್ರ ನಾಯ್ಕ ಕತಗಾಲ, ಯಾಕೂಬ ಬೆಟ್ಕುಳಿ ಇದ್ದರು.