ಕಾರವಾರ: ಹಾವೇರಿಯಿಂದ ಕಾರವಾರಕ್ಕೆ ಮುಂಬಡ್ತಿಪಡೆದು ವರ್ಗವಾಗಿ ಬಂದ ಮಹಿಳಾ ಅಧಿಕಾರಿಯೊಬ್ಬರು ಎರಡು ದಿನ ಕಾದರೂ ಈ ಹಿಂದೆ ಇದ್ದ ಅಧಿಕಾರಿ ಖುರ್ಚಿ ಬಿಟ್ಟು ಕೊಟ್ಟಿಲ್ಲ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ಸೆ 11ರಂದು ಸರೋಜ ವಿ ಹಳಕಟ್ಟಿ ಅವರಿಗೆ ಮುಂಬಡ್ತಿ ನೀಡಿ ಆದೇಶಿಸಿತ್ತು. ಅದರ ಪ್ರಕಾರ ಸರೋಜ ಹಳಕಟ್ಟಿ ಅವರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಕಾರವಾರಕ್ಕೆ ಹೋಗಿದ್ದರು. ಆದರೆ, ಅಲ್ಲಿ ಅವರಿಗೆ ಅಧಿಕಾರದ ಖುರ್ಚಿ ಸಿಗಲಿಲ್ಲ. ಕಾರಣ ಈ ಹಿಂದೆ ಅದೇ ಹುದ್ದೆಯಲ್ಲಿದ್ದ ಜಿ ಸತೀಶ್ ಎಂಬಾತರು ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ.
ಇದರಿಂದ ನೊಂದ ಅವರು ಜಿಲ್ಲಾ ಪಂಚಾಯತ ಕಚೇರಿಗೆ ಹೋಗಿ ಅಲ್ಲಿನ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು. ಆಗ ಕಚೇರಿ ಟಪಾಲಿನಲ್ಲಿ ವಿಚಾರಿಸುವ ಬಗ್ಗೆ ಉತ್ತರ ಬಂದಿದ್ದು, ಅದರ ಪ್ರಕಾರ ತಾವು ಕರ್ತವ್ಯಕ್ಕೆ ಹಾಜರಾಗುತ್ತಿರುವ ಬಗ್ಗೆ ಅವರು ಅಲ್ಲಿ ವರದಿ ಮಾಡಿಕೊಂಡರು. ಇದಾದ ನಂತರ ತಮ್ಮ ಕಚೇರಿಗೆ ತೆರಳಿ ಕಚೇರಿ ವ್ಯವಸ್ಥಾಪಕರಿಂದ ಫೋನ್ ಮಾಡಿಸಿದರೂ ಈ ಹಿಂದಿನ ಅಧಿಕಾರಿ ಬಂದು ಬೀಗದ ಕೀ ಕೊಡಲಿಲ್ಲ. ವರ್ಗಾವಣೆ ಆದೇಶ ಬಂದ ಕೂಡಲೇ ಈ ಹಿಂದಿನ ಅಧಿಕಾರಿ ಕಚೇರಿ ಎಲ್ಲಾ ಕಂಪ್ಯುಟರ್’ನ ಪಾಸ್‌ವರ್ಡ ಬದಲಿಸಿದ್ದು, ಬೆಂಗಳೂರು ಕಚೇರಿಯಿಂದ ಬಂದ ಇಮೇಲ್ ನೋಡಲಾಗದೇ ಸಿಬ್ಬಂದಿ ಪರದಾಟ ನಡೆಸಿದರು.
ಈ ಹಿಂದೆ ದಶಕಗಳ ಕಾಲ ಅವರು ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೆಲಸ ಮಾಡಿದ್ದರು. ಆದರೆ, ಎಲ್ಲಿಯೂ ಅವರಿಗೆ ಈ ರೀತಿಯ ಕೆಟ್ಟ ಅನುಭವ ಆಗಿರಲಿಲ್ಲ. ನಿವೃತ್ತಿ ಅಂಚಿನಲ್ಲಿರುವ ಸರೋಜ ಹಳಕಟ್ಟಿ ಅವರು `ಸೇವಾ ದಿನದ ಕೊನೆ ದಿನಗಳಲ್ಲಾದರೂ ಮುಂಬಡ್ತಿ ದೊರೆಯಿತು’ ಎಂಬ ಖುಷಿಯಲ್ಲಿದ್ದರು. ಆದರೆ, ಮೊದಲ ದಿನವೇ ಅವರು ಸಾಕಷ್ಟು ಸಮಸ್ಯೆ ಅನುಭವಿಸಿದರು. ಮರುದಿನ ಸಹ ಕರ್ತವ್ಯಕ್ಕೆ ಹೋದಾಗಲೂ ತೊಂದರೆ ಎದುರಿಸಿದರು. ಎರಡು ದಿನ ಕಾದರೂ ಅವರಿಗೆ ಕಾರವಾರದಲ್ಲಿ ಸೂಕ್ತ ಸ್ಪಂದನೆ ಸಿಗಲಿಲ್ಲ.
ಕಳೆದ ಒಂದು ವರ್ಷದ ಹಿಂದೆಯೇ ಸರೋಜ ಅವರಿಗೆ ಮುಂಬಡ್ತಿ ಬರಬೇಕಿತ್ತು. ಆದರೆ, ಮುಂಬಡ್ತಿಗೂ ತಡವಾಯಿತು. ಮುಂಬಡ್ತಿ ಪಡೆದು ಕಾರವಾರಕ್ಕೆ ಬಂದಾಗ ಅವರಿಗೆ ಜಿಲ್ಲಾ ಪಂಚಾಯತ ಅಧಿಕಾರಿಗಳು ಒಳಗೆ ಬಿಟ್ಟುಕೊಳ್ಳಲಿಲ್ಲ. ಇನ್ನೂ ಈಗಾಗಲೇ ಈ ಹುದ್ದೆಯಲ್ಲಿರುವ ಸತೀಶ್ ಅವರ ಮಾತೃ ಇಲಾಖೆ ಇದಲ್ಲ. ಮಾತೃ ಇಲಾಖೆಗೆ ಹಿಂತಿರುಗಿದರೆ ಜಿಲ್ಲಾ ಮಟ್ಟದ ಹುದ್ದೆ ಸಿಗಲ್ಲ ಎಂಬ ಕಾರಣಕ್ಕೆ ಅವರು ಆ ಖುರ್ಚಿ ಬಿಡಲು ಸಿದ್ಧರಿಲ್ಲ ಎಂಬ ಮಾತು ದಟ್ಟವಾಗಿದೆ. ಇದೀಗ ಬಂದ ಮಾಹಿತಿ ಪ್ರಕಾರ ಎರಡು ದಿನ ಗುದ್ದಾಡಿ ಈ ಹಿಂದೆ ಆ ಹುದ್ದೆಯಲ್ಲಿದ್ದ ಅಧಿಕಾರಿ ತಾನೇ ಮುಂದುವರೆಯುವ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದು, `ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಖುರ್ಚಿಯಲ್ಲಿ ಅಂಥ ವಿಶೇಷ ಏನಿದೆ’? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.