ಉತ್ತರ ಕನ್ನಡ ಜಿಲ್ಲೆಯ ಉಪ ನೊಂದಣಾಧಿಕಾರಿ ಕಚೇರಿಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಲಂಚ ಸ್ವೀಕಾರ ನಡೆಯುತ್ತಿದೆ. ನೊಂದಣಾಧಿಕಾರಿ ಕಚೇರಿಗೆ ಭೇಟಿ ನೀಡುವವರಿಗೆ ಅಲ್ಲಿನ ಸಿಬ್ಬಂದಿ ಕೈ ಸನ್ನೆ, ಬಾಯಿ ಸನ್ನೆ ಹಾಗೂ ಕ್ಯಾಲ್ಕುಲೇಟರ್ ಮೂಲಕ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಲಂಚ ಪಾವತಿಗೆ ನಿಮ್ಮಲ್ಲಿ ಹಣ ಇಲ್ಲದಿದ್ದರೆ ಫೋನ್ ಫೇ ಮೂಲಕ ಸಹ ಕಾಣಿಕೆ ಪಾವತಿಸುವ ವ್ಯವಸ್ಥೆ ಉಪನೊಂದಣಾಧಿಕಾರಿ ಕಚೇರಿಗಳಲ್ಲಿದೆ!
ಪ್ರಸ್ತುತ ಎಲ್ಲಾ ಬಗೆಯ ನೊಂದಣಿಗಳು ಬ್ಯಾಂಕ್ ಚಲನ್ ಮೂಲಕ ನಡೆಯುತ್ತಿದೆ. ಅದಕ್ಕೆ ಜನ ಸಹ ಒಗ್ಗಿಕೊಂಡಿದ್ದು, ಅಧಿಕಾರಿ ಹಾಗೂ ಸಿಬ್ಬಂದಿಯೂ ಆನ್‌ಲೈನ್ ಲಂಚ ಸ್ವೀಕರಿಸುತ್ತಿದ್ದಾರೆ. ಕೆಲ ದಿನದ ಹಿಂದೆ ಯುವಕನೊಬ್ಬ ವಿವಾಹ ನೊಂದಣಿಗೆ ಹಳಿಯಾಳದ ನೊಂದಣಾಧಿಕಾರಿ ಕಚೇರಿಗೆ ತೆರಳಿದ್ದು, ವಿವಾಹ ನೊಂದಣಿ ಪತ್ರ ಪಡೆಯುವ ವೇಳೆ ಫೋನ್ ಪೆ ಮೂಲಕ 350 ರೂ ಲಂಚ ನೀಡಿದ್ದಾನೆ. ಆ ಯುವಕನ ಬಳಿ 500 ರೂಪಾಯಿಗೆ ಅಲ್ಲಿನ ಅಧಿಕಾರಿ ಬೇಡಿಕೆಯಿಟ್ಟಿದ್ದು, ಕೊನೆಗೆ 350 ರೂಪಾಯಿಯನ್ನಾದರೂ ಪಾವತಿಸುವಂತೆ ದುಂಬಾಲು ಬಿದ್ದಿದ್ದಾರೆ. ಅವರ ಕಾಟ ಸಹಿಸಲಾಗದೇ ಸಿಬ್ಬಂದಿ ಖಾತೆಗೆ ಆ ಯುವಕ ಹಣ ಹಾಕಿದ್ದಾನೆ.
ಸಿಸಿ ಕ್ಯಾಮರಾ ಅಗತ್ಯ
ಉಪನೊಂದಣಾಧಿಕಾರಿ ಕಚೇರಿಗಳ ಒಳಭಾಗದಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವುದು ಭ್ರಷ್ಟರ ಪಾಲಿಗೆ ವರದಾನವಾಗಿದೆ. ಅನೇಕ ಕಡೆ ಅಧಿಕೃತ ದಸ್ತಾವೇಜು ಬರಹಗಾರರಿಗೆ ಬೆಲೆ ನೀಡದೇ ಎಜೆಂಟರ ಮೂಲಕ ದಸ್ತು ನಡೆಸುವ ಕಾರ್ಯ ನಡೆದಿದ್ದು, ಎಜೆಂಟರು ದುಪ್ಪಟ್ಟು ಹಣ ನೀಡುತ್ತಿರುವುದೇ ಇದಕ್ಕೆ ಕಾರಣ.
ಯಾವುದಕ್ಕೆ ಎಷ್ಟು ದರ?
ನೊಂದಣಾಧಿಕಾರಿ ಕಚೇರಿಯಲ್ಲಿ ಎಲ್ಲಾ ಕೆಲಸಗಳಿಗೂ ಇಂತಿಷ್ಟು ಎಂದು ಲಂಚದ ದರ ನಿಗದಿಯಾಗಿದೆ. ವಿವಾಹ ನೊಂದಣಿಗೆ ಕನಿಷ್ಟ 500ರೂ, ಭೂ ನೊಂದಣಿಗೆ ಕನಿಷ್ಟ 10 ಸಾವಿರ ರೂ ಸೇರಿ ಬಗೆ ಬಗೆಯ ಕೆಲಸಗಳಿಗೆ ಬಗೆ ಬಗೆಯ ದರವನ್ನು ಅಧಿಕಾರಿಗಳು ನಿಗದಿ ಮಾಡಿದ್ದಾರೆ. ಅಲ್ಲಿನ ಸಿಬ್ಬಂದಿ ಮೂಲಕ ಈ ಹಣ ಸ್ವೀಕಾರವಾಗುತ್ತಿದೆ.
ಯಲ್ಲಾಪುರದಲ್ಲಿ ಬೇರೆ ವ್ಯವಸ್ಥೆ!
ನೊಂದಣಿ, ದೃಢೀಕೃತ ಪ್ರತಿ ಸೇರಿ ವಿವಿಧ ಕೆಲಸಗಳಿಗಾಗಿ ಯಲ್ಲಾಪುರ ಉಪನೊಂದಣಿ ಕಚೇರಿಗೆ ಆಗಮಿಸುವವರಿಂದ ಅಲ್ಲಿನ ಸಿಬ್ಬಂದಿ ನೇರವಾಗಿ ಹಣ ಪಡೆಯುತ್ತಾರೆ. ಕಾವೇರಿ ಆನ್‌ಲೈನ್ ಮೂಲಕ ಪಡೆಯುವ ದಾಖಲೆಗಳಿದ್ದರೆ ಅಲ್ಲಿನ ಸಿಬ್ಬಂದಿಯೊಬ್ಬರು ತಾವೇ ನಡೆಸುವ ಕಂಪ್ಯುಟರ್ ಸೆಂಟರಿಗೆ ಜನರನ್ನು ಕಳುಹಿಸುತ್ತಾರೆ. ಉಪನೊಂದಣಾಧಿಕಾರಿ ಕಚೇರಿ ಸಿಬ್ಬಂದಿಯ ಸಹೋದರ ಮಳಿಗೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಸರ್ಕಾರಕ್ಕೆ ಪಾವತಿಯಾಗುವ ಹಣಕ್ಕಿಂತ ಮೂರು ಪಟ್ಟು ಹೆಚ್ಚಿನ ಬೆಲೆಗೆ ಇಲ್ಲಿ ದಾಖಲೆಗಳು ಮಾರಾಟವಾಗುತ್ತದೆ.