ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ !
ಮೃತ್ಯು ಕುಣಿಯುತಲಿಹುದು ಕೇಕೆ ಹಾಕುತಲಿ||
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ|
ಎತ್ತಲಿದಕೆಲ್ಲ ಕಡೆ? ಮಂಕುತಿಮ್ಮ||
ಡಿವಿಜಿ ಅವರ ಈ ಮಾತುಗಳು ಇಂದಿಗೆ ಬಹಳ ಪ್ರಸ್ತುತ ಎನಿಸುತ್ತದೆ. ಆತ್ಮಹತ್ಯೆಯಿಂದ ಉಂಟಾಗುವ ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಲಿದೆ. ನಮ್ಮ ದೇಶ ವಿಶ್ವದಲ್ಲಿಯೇ ಅತಿ ಹೆಚ್ಚು ಸಂಖ್ಯೆಯಲ್ಲಿ ಯುವ ಸಮುದಾಯವನ್ನು ಹೊಂದಿದೆ. ಭಾರತದ ಯುವಜನರಲ್ಲಿ ಸಾವಿಗೆ ಅತ್ಯಂತ ಪ್ರಮುಖ ಕಾರಣಗಳಲ್ಲಿ ಆತ್ಮಹತ್ಯೆ ಎರಡನೇ ಸ್ಥಾನದಲ್ಲಿದೆ. ಇದೊಂದು ಎಚ್ಚರಿಕೆಯ ಕರೆ ಗಂಟೆ ಅಲ್ಲವೇ? ಖಂಡಿತವಾಗಿಯೂ ಇದೊಂದು ದೊಡ್ಡ ಸಾಮಾಜಿಕ ಪಿಡುಗಾಗಿ ನಮ್ಮ ಸಮಾಜವನ್ನು ಕಾಡುತ್ತಲಿದೆ.
ಪ್ರತಿ ವರ್ಷ ಏಳು ಲಕ್ಷಕ್ಕೂ ಹೆಚ್ಚು ಮಂದಿ ತಮ್ಮಜೀವನವನ್ನು ಆತ್ಮಹತ್ಯೆಯಿಂದ ಕೊನೆಗೊಳಿಸುತ್ತಾರೆ. 15ರಿಂದ 29 ವಯಸ್ಕರಲ್ಲಿ ಅತಿ ಹೆಚ್ಚಾಗಿ ಈ ಸಮಸ್ಯೆ ಕಂಡು ಬರುತ್ತದೆ. ಯಾರಿಗೆ ಆದರೂ ಜೀವನದಲ್ಲಿ ಬಹಳಷ್ಟು ರೀತಿಯ ಒತ್ತಡಗಳ ಎದುರಿಸುವ ಪರಿಸ್ಥಿತಿ ಬರುತ್ತದೆ. ಉದ್ಯೋಗನಷ್ಟ, ಪರೀಕ್ಷೆಯಲ್ಲಿ ನಪಾಸು ಆಗುವುದು, ಹತ್ತಿರದ ಕುಟುಂಬ ಸದಸ್ಯರ ಮರಣ, ಇಂತಹ ಸಮಸ್ಯೆಗಳು ಎದುರಾದಾಗ ಜೀವನ ಇನ್ನೂ ಸಾಕು ಎನ್ನುವ ಆಲೋಚನೆ ಮೂಡಿ ಬರಬಹುದು.
ಯಾರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ?
1. ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರು, ಖಿನ್ನತೆ, ಆತಂಕದಲ್ಲಿರುವವರು
2. ಕುಡಿತ, ತಂಬಾಕು ಹಾಗೂ ಇತರೆ ಮಾದಕ ದ್ರವ್ಯ ಸೇವಿಸುವವರು
3. ಅತಿಯಾದ ಮುಂಗೋಪ ಮತ್ತು ತಾಳ್ಮೆಯ ಕೊರತೆ ಉಳ್ಳವರು
4. ಜೀವನದಲ್ಲಿ ದೊಡ್ಡ ಬದಲಾವಣೆ ಅಥವಾ ಆಘಾತ ಅನುಭವಿಸುವವರು
5. ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟ ಮತ್ತು ಸಾಲದ ಹೊರೆಯಲ್ಲಿರುವವರು
6. ಒಂಟಿತನ ಕಾಡುತ್ತಿರುವವರು
7. ಕ್ಯಾನ್ಸರ್ ನಂತಹ ಮಾರಣಾಂತಿಕ ದೈಹಿಕ ಕಾಯಿಲೆ ಹೊಂದಿದವರು
8. ಕುಟುಂಬದಲ್ಲಿ ಆತ್ಮಹತ್ಯೆ, ಅನುವಂಶೀಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು
ಆತ್ಮಹತ್ಯೆ ತಡೆಗೆ ಇರುವ ದಾರಿ ಒಂದೇ!
ಯಾವುದೇ ವ್ಯಕ್ತಿ ಒಂಟಿಯಾಗಿ ಜೀವಿಸುತ್ತಿದ್ದಾನೆ ಎಂದಾದರೆ ಆತನಿಗೆ ಆಪ್ತ ಸಮಾಲೋಚನೆ ಅಗತ್ಯ. ವ್ಯಕ್ತಿ ಮಾನಸಿಕ ಒತ್ತಡಕ್ಕೆ ಸಿಲುಕಿದಾಗ ಸಹ ಆಪ್ತರ ಮಾತು ಮುಖ್ಯ.
ಡಾ. ಮಧುಮಿತ
ನರ-ಮನೋರೋಗ ಮತ್ತು ದುಶ್ಚಟ ನಿವಾರಣ ತಜ್ಞರು,
ಮಹಿಳಾ ವೈದ್ಯರ ಘಟಕ, ಶಿರಸಿ