ಶಾಲೆಗೆ ಅಕ್ಕಿ ಇಲ್ಲ… 15 ದಿನಗಳಿಂದ ಮಕ್ಕಳಿಗೆ ಅನ್ನದಾತರಾದ ಗ್ರಾಮಸ್ಥರು!
ಹಸಿದ ಹೊಟ್ಟೆಗೆ ಅಕ್ಷರ ಕಲಿಯಲು ಸಾಧ್ಯವೇ? ಮಕ್ಕಳಿಗೆ ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರವೂ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶಾಲೆಗೆ ಅಕ್ಕಿ ಪೂರೈಕೆಯಾಗದಿದ್ದರೆ ಮಕ್ಕಳ ಗತಿಯೇನು? ಇಂತಹ ಸಂದರ್ಭದಲ್ಲಿ ಸರ್ಕಾರದ ಜವಾಬ್ದಾರಿಯನ್ನೇ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಮಾನವೀಯತೆ ಮೆರೆದಿದ್ದಾರೆ ಈ ಗ್ರಾಮದ ಜನರು.
ಹೌದು… ಇದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಳ್ಳಾಳ ಗ್ರಾಮದ ಹೃದಯಸ್ಪರ್ಶಿ ಕಥೆ.
ಚಳ್ಳಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 9 ಮತ್ತು 10ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಅಕ್ಕಿ ಪೂರೈಕೆಯಾಗದೆ ಸಮಸ್ಯೆ ಎದುರಾಗಿದೆ. ಈ ಕುರಿತು ಅಕ್ಷರ ದಾಸೋಹ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಗೆ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಶಾಲೆಯ ಮಕ್ಕಳ ಊಟಕ್ಕೆ ತೊಂದರೆಯಾಗಿದೆ.
ಆದರೆ ಮಕ್ಕಳ ಹಸಿವನ್ನು ನೋಡಿಕೊಂಡು ಸುಮ್ಮನಿರಲು ಊರಿನ ಜನರಿಗೆ ಸಾಧ್ಯವಾಗಲಿಲ್ಲ. ಸರ್ಕಾರದ ನೆರವಿಗಾಗಿ ಕಾಯುತ್ತಾ ಕೂರದೆ, ತಾವೇ ಮುಂದೆ ಬಂದು ಮಕ್ಕಳ ಊಟಕ್ಕೆ ಅಕ್ಕಿ ನೀಡಲು ಆರಂಭಿಸಿದ್ದಾರೆ.
ಕಳೆದ 15 ದಿನಗಳಿಂದ ನಿರಂತರವಾಗಿ ಗ್ರಾಮಸ್ಥರೇ ಶಾಲೆಗೆ ಅಕ್ಕಿ ಪೂರೈಸುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರತಿದಿನ ಸುಮಾರು ಅರ್ಧ ಕ್ವಿಂಟಾಲ್ ಅಕ್ಕಿಯನ್ನು ದಾನವಾಗಿ ನೀಡಿ ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದಾರೆ.
ಇಲ್ಲಿ ನೋಡಿ… ಈ ಮಕ್ಕಳು ತಟ್ಟೆಯಲ್ಲಿ ಅನ್ನ, ಸಾಂಬಾರು ಹಾಕಿಸಿಕೊಂಡು ಸಂತೋಷದಿಂದ ಊಟ ಮಾಡುತ್ತಿದ್ದಾರೆ. ಆ ಮಕ್ಕಳ ಮುಖದಲ್ಲಿರುವ ತೃಪ್ತಿಗೆ ಕಾರಣವಾಗಿರುವುದು ಊರಿನ ಜನರ ಪ್ರೀತಿ ಮತ್ತು ಕಾಳಜಿ.
ಸರ್ಕಾರ ಮಾಡಬೇಕಾದ ಕೆಲಸವನ್ನು ನಾವೇಕೆ ಮಾಡಬೇಕು ಎಂದು ಪ್ರಶ್ನಿಸುವ ಬದಲು, ನಮ್ಮೂರಿನ ಮಕ್ಕಳು ಹಸಿವಿನಿಂದ ಇರಬಾರದು ಎಂಬ ದೊಡ್ಡ ಮನಸ್ಸು ತೋರಿಸಿದ್ದಾರೆ ಗ್ರಾಮಸ್ಥರು.
ಒಂದು ಕಡೆ ಮಕ್ಕಳಿಗೆ ಅನ್ನ ನೀಡಬೇಕಾದ ಜವಾಬ್ದಾರಿ, ಮತ್ತೊಂದು ಕಡೆ ಅಕ್ಕಿ ಪೂರೈಕೆಯಾಗದ ಸಮಸ್ಯೆ. ಈ ಎರಡರ ನಡುವೆ ಸಿಲುಕಿರುವ ಶಾಲಾ ಆಡಳಿತ ಮಂಡಳಿ ಮತ್ತು ಮಕ್ಕಳಿಗೆ ಸದ್ಯಕ್ಕೆ ಊರ ಜನರೇ ಆಸರೆಯಾಗಿದ್ದಾರೆ.
ಆದರೆ ಇಲ್ಲಿ ಒಂದು ಪ್ರಶ್ನೆ ಮಾತ್ರ ಉಳಿದಿದೆ. ಮಕ್ಕಳಿಗೆ ಬಿಸಿಯೂಟ ನೀಡುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳು ಈ ಸಮಸ್ಯೆಯನ್ನು ಇನ್ನೂ ಎಷ್ಟು ದಿನ ನಿರ್ಲಕ್ಷಿಸುತ್ತಾರೆ? ಗ್ರಾಮಸ್ಥರು ಪ್ರತಿದಿನ ಅಕ್ಕಿ ನೀಡಿದರೆ ಮಾತ್ರ ಮಕ್ಕಳಿಗೆ ಊಟ ಸಿಗಬೇಕೇ?
ಮಕ್ಕಳ ಹಸಿವಿಗೆ ಸ್ಪಂದಿಸಿದ ಚಳ್ಳಾಲ ಗ್ರಾಮದ ಜನರ ಕಾರ್ಯ ನಿಜಕ್ಕೂ ಶ್ಲಾಘನೀಯ. ಆದರೆ ಮಕ್ಕಳಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯವನ್ನು ಗ್ರಾಮಸ್ಥರ ದೇಣಿಗೆಯ ಮೇಲೆ ಅವಲಂಬಿಸುವ ಪರಿಸ್ಥಿತಿ ಬರಬಾರದು.
ಮಕ್ಕಳ ಹೊಟ್ಟೆ ತುಂಬಿಸಿದ ಗ್ರಾಮಸ್ಥರಿಗೆ ಒಂದು ಸಲಾಂ. ಅದೇ ರೀತಿ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಶಾಲೆಗೆ ಸಮರ್ಪಕವಾಗಿ ಅಕ್ಕಿ ಪೂರೈಕೆ ಮಾಡಬೇಕಿದೆ.






