ಕುಮಟಾ: `ಎರಡು ವರ್ಷದ ಹಿಂದೆ ಯಾಣದಲ್ಲಿ ಅಪರಿಚಿತ ಶವ ದೊರೆತಿದ್ದು, ಆ ಪ್ರಕರಣವನ್ನು ಎಲ್ಲರೂ ನಿರ್ಲಕ್ಷಿಸಿದ್ದಾರೆ. ಅಪರಿಚಿತ ಶವ ಪ್ರಕರಣ ತನಿಖೆ ನಡೆದಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು ಸಿಕ್ಕಿ ಬೀಳಲಿದ್ದಾರೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಅಧ್ಯಕ್ಷ ನಾಗರಾಜ ಶೇಟ್ ಹೇಳಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು `28 ಜೂನ್ 2022ರಂದು ರಾತ್ರಿ ಯಾಣದ ಬಳಿ ಕೊಲೆ ನಡೆದಿದ್ದು, ನಂತರ ಶವ ಅನುಮಾನಾಸ್ಪದ ರೀತಿಯಲ್ಲಿ ಸಿಕ್ಕಿದೆ. ಪೊಲೀಸರು ಅಪರಿಚಿತ ಶವ ಸಿಕ್ಕಿದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಆದರೆ, ಆ ಭಾಗದ ಶಿವರಾಮ ದೇವು ಗೌಡ ಎಂಬಾತರು ಆ ದಿನ ಕೊಲೆ ನಡೆದಿದನ್ನು ನೋಡಿರುವುದಾಗಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಸಾಕ್ಷಿ ಹೇಳಲು ಅವರು ಸಿದ್ಧರಿದ್ದು, ಪ್ರಸ್ತುತ ಶಿವರಾಮ ಗೌಡರ ವಿರುದ್ಧ ಪೋಕ್ಸೋ ದೂರು ದಾಖಲಿಸಿ ಅವರು ಸಾಕ್ಷಿ ಹೇಳಲು ಮುಂದೆ ಬಾರದಂತೆ ತಡೆಯಲಾಗಿದೆ’ ಎಂದು ನಾಗರಾಜ ಶೇಟ್ ದೂರಿದ್ದಾರೆ.
`ದೇಶದ ನಾನಾ ಭಾಗಗಳಿಂದ ಜನರನ್ನು ಕಾಡು ಪ್ರದೇಶಕ್ಕೆ ಕರೆದು ಮಳೆಗಾಲದ ರಾತ್ರಿ ಅವಧಿಯಲ್ಲಿ ಅವರ ದರೋಡೆ ಮಾಡಿ ಕೊಲೆ ಮಾಡುತ್ತಿರುವ ಅನುಮಾನವಿದೆ. ಹೀಗಾಗಿ ಅಂದು ಯಾಣದಲ್ಲಿ ಸಿಕ್ಕಿದ ಅಪರಿಚಿತ ಶವದ ಬಗ್ಗೆ ತನಿಖೆ ನಡೆಯಬೇಕು. ಆಗ, ಹಲವು ಬಗೆಯ ಅಕ್ರಮ ಹಾಗೂ ಇನ್ನಷ್ಟು ಸಾವು-ನೋವಿನ ಬಗ್ಗೆ ಸತ್ಯ ಹೊರಬರಲಿದೆ’ ಎಂದವರು ಹೇಳಿದ್ದಾರೆ. ಸಾಕ್ಷಿದಾರರನ್ನು ಹೆದರಿಸುವ ಉದ್ದೇಶದಿಂದ ಸುಳ್ಳು ಪ್ರಕರಣ ದಾಖಲಿಸಲಾಗಿದ್ದು, ಸಾಕ್ಷಿದಾರರಿಗೆ ರಕ್ಷಣೆ ಅಗತ್ಯ’ ಎಂದು ನಾಗರಾಜ ಶೇಟ್ ಹೇಳಿದ್ದಾರೆ.
`ಎರಡು ವರ್ಷದ ಹಿಂದೆಯೇ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದರೂ ಕ್ರಮವಾಗಿಲ್ಲ. ಇದೀಗ 8 ತಿಂಗಳ ಹಿಂದೆ ಕೊಲೆ ನಡೆದಿದನ್ನು ನೋಡಿದ ಬಗ್ಗೆ ಸಾಕ್ಷಿ ಹೇಳಲು ಮುಂದಾದ ಶಿವರಾಮ ದೇವು ಗೌಡ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ. ಬಂಧನದ ಭೀತಿಯಿಂದ ಅವರು ಅಡಗಿಕೊಂಡಿದ್ದು, ರಕ್ಷಣೆ ಒದಗಿಸಿದಲ್ಲಿ ಈಗಲೂ ಅವರು ಕೊಲೆ ಪ್ರಕರಣದ ಸಾಕ್ಷಿ ಹೇಳಲು ಸಿದ್ಧರಾಗಿದ್ದಾರೆ’ ಎಂದು ಅವರ ಪರವಾಗಿ ನಾಗರಾಜ ಶೇಟ್ ಹೇಳಿದ್ದಾರೆ.
`ಸೂಕ್ತ ತನಿಖೆ ನಡೆದಲ್ಲಿ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ಹಲವು ಪ್ರಕರಣಗಳಿಗೆ ಇಲ್ಲಿ ಸಾಕ್ಷಿ ಸಿಗಲಿದೆ. ಕಾಣೆಯಾದವರು ಜೀವ ಕಳೆದುಕೊಳ್ಳುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸದೇ ಇದ್ದಲ್ಲಿ ಉಗ್ರ ಹೋರಾಟ ಅನಿವಾರ್ಯ’ ಎಂದವರು ಹೇಳಿದ್ದಾರೆ. ಈ ಬಗ್ಗೆ ಹೈಕೋರ್ಟ, ಸುಪ್ರೀಂ ಕೋರ್ಟ ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಗೆ ಸಹ ನಾಗರಾಜ ಶೇಟ್ ಪತ್ರ ರವಾನಿಸಿದ್ದಾರೆ.
ನಾಗರಾಜ ಶೇಟ್ ಅವರು ಬಿಡುಗಡೆ ಮಾಡಿದ ವಿಡಿಯೋ ಹೇಳಿಕೆ ಇಲ್ಲಿ ನೋಡಿ..



