ಅಂಕೋಲಾ: ಬಹ್ಮೂರಿನ ಶಾಂತಲಾ ಗುರುಮೂರ್ತಿ ಹೆಗಡೆ (28) ಬ್ರೇನ್ ಟ್ಯೂಮರಿನಿಂದ ಶುಕ್ರವಾರ ಸಾವನಪ್ಪಿದ್ದಾರೆ.
ಎರಡು ವರ್ಷದ ಹಿಂದೆ ಶಾಂತಲಾ ಅವರು ಬ್ರಹ್ಮೂರಿನ ಗುರುಮೂರ್ತಿ ಹೆಗಡೆ ಅವರನ್ನು ಮದುವೆ ಆಗಿದ್ದರು. ಕಳೆದ 2-3 ತಿಂಗಳಿನಿoದ ಅನಾರೋಗ್ಯಕ್ಕೆ ಒಳಗಾದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅಕ್ಟೊಬರ್ 10ರಂದು ತಲೆನೋವು ಕಾಣಿಸಿಕೊಂಡ ಹಿನ್ನಲೆ ಶಾಂತಲಾ ಅವರನ್ನು ಮಾವ ಗಜಾನನ ಭಟ್ಟ ಹಾಗೂ ಸಂಬoಧಿಕರು ಸೇರಿ ಕುಮಟಾದ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದರು.
ಪರೀಕ್ಷೆ ನಡೆಸಿದ ವೈದ್ಯರು ಶಾಂತಲಾ ಅವರಿಗೆ ಬ್ರೇನ್ ಟ್ಯೂಮರ್ ಆಗಿರುವ ಬಗ್ಗೆ ತಿಳಿಸಿದ್ದು, ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸ್ಸು ಮಾಡಿದ್ದರು. ಅದರ ಪ್ರಕಾರ ಎಲ್ಲರೂ ಸೇರಿ ಮಂಗಳೂರಿಗೆ ಕರೆದೊಯ್ದಿದ್ದು, ದಾರಿ ಮದ್ಯೆ ಶಾಂತಲಾ ಪ್ರಜ್ಞೆ ತಪ್ಪಿದ್ದರು. ಅಕ್ಟೊಬರ್ 11ರ ಬೆಳಗ್ಗೆ ಶಾಂತಲಾರನ್ನು ಪರೀಕ್ಷಿಸಿದ ಕೆ ಎಸ್ ಹೆಗಡೆ ಆಸ್ಪತ್ರೆಯ ವೈದ್ಯರು ಆಕೆ ಸಾವನಪ್ಪಿರುವುದಾಗಿ ಘೋಷಿಸಿದರು. ತನ್ನ ಅತ್ತೆ ಮಗಳು ಸಾವನಪ್ಪಿದ ಬಗ್ಗೆ ಕುಮಟಾ ಬರಗದ್ದೆಯ ಗಣಪತಿ ಗೋಪಾಲಕೃಷ್ಣ ಹೆಗಡೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.



