ಕಲೆ, ಸಾಹಿತ್ಯ, ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಯಲ್ಲಾಪುರದ ಕಳಚೆ ಊರಿನ ಸುಬ್ರಾಯ ಹೆಗಡೆ ಅವರು ಆಕರ್ಷಕ ಮುಖವರ್ಣಿಕೆ, ಹಿತಮಿತವಾದ ಮಾತಿನ ಮೂಲಕ ಯಕ್ಷಗಾನ ನೋಡುಗರ ಮನಗೆದ್ದಿದ್ದಾರೆ.
ಹಿರಿಯ ಕಲಾವಿದರಾದ ಸೂತ್ರೆ ಅನಂತ ಭಟ್ರು, ಕೊಣೆಮನೆ ಮಹಾಬಲೇಶ್ವರ ಭಟ್ರು, ಗ ರಾ ಗದ್ದೆ, ಇಟ್ಲ ಮನೆ ಭಟ್ರು, ಕರಿಮನೆ ಶಂಕರಣ್ಣ ಮೊದಲದವರು ನಡೆದ ದಾರಿಯಲ್ಲಿ ಸುಬ್ರಾಯ ಹೆಗಡೆ ಅವರು ಸಹ ಸಾಧನೆ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ನಾಟಕ, ಯಕ್ಷಗಾನ ನೋಡುವ ಹವ್ಯಾಸ ಹೊಂದಿದ್ದ ಅವರು ಯಕ್ಷಗಾನದಲ್ಲಿ ಮೊದಲು ಮಹಿಳಾ ಪಾತ್ರಗಳಿಂದ ಜನರ ಮನ ಗೆದ್ದರು. ಅದಾದ ನಂತರ ಹಾಸ್ಯ ಪಾತ್ರಗಳನ್ನು ನಿಭಾಯಿಸಿದರು.
ಹೊಸತೋಟ ಗಜಾನನ ಭಟ್ಟ ಅವರಲ್ಲಿ ಕೆಲಕಾಲ ಯಕ್ಷಗಾನ ಅಭ್ಯಾಸ ಮಾಡಿದ ಸುಬ್ರಾಯ ಹೆಗಡೆ ಅವರು ಊರಿನ ಸುತ್ತಮುತ್ತ ನಡೆಯುವ ಎಲ್ಲಾ ಪ್ರಸಂಗಗಳಿಗೂ ಹಾಜರಾಗುತ್ತಿದ್ದರು. ಅವಕಾಶ ಸಿಕ್ಕರೆ ವೇದಿಕೆ ಏರಿ ಪಾತ್ರ ಮಾಡುತ್ತಿದ್ದರು. ಆಗಾಗ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳಲ್ಲಿ ಪಾತ್ರ ನಿಭಾಯಿಸುತ್ತಿದ್ದ ಅವರು ಯುವಜನ ಮೇಳಗಳ ಮೂಲಕ ಪ್ರಚಾರಕ್ಕೆ ಬಂದರು. ಅಲ್ಲಿನ ಯಕ್ಷಗಾನ ಸ್ಪರ್ಧೆಗಳಲ್ಲಿ ಅವರು ಸದಾ ಮಿಂಚುತ್ತಿದ್ದರು. ರಾಜ್ಯಮಟ್ಟದ ಯುವ ಜನ ಮೇಳದಲ್ಲಿ ಸಹ ಸುಬ್ರಾಯ ಹೆಗಡೆ ಅವರು ಭಾಗವಹಿಸಿದ ತಂಡದವರು ಯಕ್ಷಗಾನ ಪ್ರದರ್ಶಿಸಿ ಮೆಚ್ಚುಗೆ ಪಡೆದಿದ್ದಾರೆ.
ಮಾಗಧ ಪಾತ್ರ ಮಾಡುವುದು ಎಂದರೆ ಹೆಗಡೆ ಅವರಿಗೆ ಅಚ್ಚುಮೆಚ್ಚು. ಕಳಚೆಯ ಸರ್ವೋದಯ ಯುವಕ ಸಂಘದ ನೇತೃತ್ವದಲ್ಲಿ ಸುಬ್ರಾಯ ಹೆಗಡೆ ಅವರನ್ನು ಒಳಗೊಂಡ ಯಕ್ಷಗಾನ ತಂಡ ದೇಶದ ಅನೇಕ ಪ್ರತಿಷ್ಠಿತ ಉತ್ಸವಗಳಲ್ಲಿ ಭಾಗವಹಿಸಿದೆ. ಅಪನಾ ಉತ್ಸವ, ತಂಜಾವೂರು ಉತ್ಸವ, ಹಂಪಿ ಉತ್ಸವ, ಕರಾವಳಿ ಉತ್ಸವ ಮೊದಲಾದವುಗಳಲ್ಲಿ ಹೆಗಡೆಯವರು ಪ್ರತಿಭೆ ಪ್ರದರ್ಶಿಸಿದ್ದಾರೆ.
1978ರಿಂದ 2004ರವರೆಗೆ ಯಕ್ಷಗಾನದಲ್ಲಿ ಅನೇಕ ಪಾತ್ರಗಳನ್ನು ಸುಬ್ರಾಯ ಹೆಗಡೆ ಅವರು ನಿಭಾಯಿಸಿದ್ದಾರೆ. ನಂತರ ಕೃಷಿ ಕಾರ್ಯಕ್ಕಾಗಿ ಜೊಯಿಡಾದ ಚವ್ಕಕ್ಕೆ ತೆರಳಿ ನೆಲಸಿದ ಅವರು ಯಕ್ಷಗಾನ ಹೊರತಾಗಿಯೂ ಹಲವು ಕ್ಷೇತ್ರದ ಮೂಲಕ ಸೇವೆ ಮಾಡಿದ್ದಾರೆ.
– ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ