ಶಿರಸಿ: ಅಮೇರಿಕಾ, ಜರ್ಮನಿ ಸೇರಿ ವಿವಿಧ ದೇಶಗಳಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಶಿರಸಿ ಮೂಲದ ರಮೇಶ್ ಪಾಡುರಂಗ ಪಾವಸ್ವರ (65) ಇದೀಗ ಅನಾಥರಾಗಿದ್ದಾರೆ.
ರಮೇಶ ಪಾವಸ್ವರ್ ಅವರ ಸಹೋದರಿ ಖ್ಯಾತ ವೈದ್ಯರು. ಅವರ ಮಗ ಸಹ ಮುಂಬೈಯಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ. ಆದರೆ, ಅವರ ವಿಳಾಸ ಅರಿವಿಲ್ಲ. ಪತ್ನಿ ಅವರಿಂದ ದೂರವಾಗಿದ್ದು, ನಿವೃತ್ತಿ ನಂತರ ಅವರು ಅಲ್ಲಲ್ಲಿ ಅಲೆದಾಟ ನಡೆಸಿ ಕೊನೆಗೆ ಅನಾಥ ಆಶ್ರಮ ಸೇರಿದ್ದಾರೆ!
ಐದು ದಿನಗಳ ಹಿಂದೆ ಉಡುಪಿಗೆ ಹೋದ ಅವರು `ನಾನು ಎಲ್ಲಾ ಕಳೆದುಕೊಂಡಿದ್ದೇನೆ. ನನಗೆ ಆಸರೆ ಬೇಕು’ ಎಂದು ಪೊಲೀಸರ ಬಳಿ ಅಂಗಲಾಚಿದ್ದಾರೆ. ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ಆರೋಗ್ಯ ವಿಚಾರಿಸಿ ಉಡುಪಿಯ ಬೈಲೂರಿನಲ್ಲಿರುವ `ಹೊಸ ಬೆಳಕು’ ಆಶ್ರಮಕ್ಕೆ ದಾಖಲಿಸಿದ್ದಾರೆ.
10ಕ್ಕೂ ಅಧಿಕ ಭಾಷೆ ಮಾತನಾಡುವ ಅವರು ಪ್ರಸ್ತುತ ಒಂದು ಭಾಷೆಯಲ್ಲಿ ಸಹ ಸರಿಯಾಗಿ ಉತ್ತರಿಸುತ್ತಿಲ್ಲ. ಶಿರಸಿ ತನ್ನ ಊರು ಎಂದು ಹೇಳಿಕೊಂಡಿರುವ ರಮೇಶ ಪಾವಸ್ವರ್ ಇನ್ನಷ್ಟು ಮಾಹಿತಿ ಹೇಳುವಂತೆ ಕೇಳಿದರೂ ಮಾತನಾಡುತ್ತಿಲ್ಲ.
ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಅವರು ಕೆಲ ದಿನಗಳಿಂದ ಊಟ ಮಾಡಿರಲಿಲ್ಲ. ಸ್ನಾನಕ್ಕೆ ಸಹ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಉನ್ನತ ಓದು, ಅತ್ಯುತ್ತಮ ಉದ್ಯೋಗ ಮಾಡಿದ್ದ ಕಾರಣ ಭಿಕ್ಷೆ ಬೇಡಲು ಸಹ ಅವರಿಂದ ಸಾಧ್ಯವಾಗಿಲ್ಲ. ದುಡಿಮೆಯ ಒಂದು ಚೂರು ಹಣ ಸಹ ಅವರ ಬಳಿಯಿಲ್ಲ. ಹೀಗಿರುವಾಗ ಹೊಸ ಬೆಳಕು ಆಶ್ರಮಕ್ಕೆ ಬಂದ ತಕ್ಷಣ `ಇದು ಆಶ್ರಮ ಅಲ್ಲ, ಸ್ವರ್ಗ’ ಎಂದು ಹೇಳಿರುವುದು ರಮೇಶ್ ಪಾವಸ್ವರ ಅವರ ಮೊದಲ ನುಡಿ.
ನೇರ ಸ್ವಭಾವದ ರಮೇಶ ಪಾವಸ್ವರ್ ಪ್ರಸ್ತುತ ಸದಾ ಪುಸ್ತಕ ಹಿಡಿದು ಕುಳಿತಿರುತ್ತಾರೆ. `ಏನಾದರೂ ಕೆಲಸ ಕೊಡಿ’ ಎಂದು ಆಶ್ರಮದವರನ್ನು ಕೇಳುತ್ತಿದ್ದಾರೆ. `ತಾನು ಒಂಟಿ’ ಎನ್ನುತ್ತಿರುವ ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ಪೊಲೀಸರು ಸಹ ಇದೀಗ ಅವರ ಸಂಬoಧಿಕರ ಹುಡುಕಾಟದಲ್ಲಿದ್ದಾರೆ.
ರಮೇಶ ಪಾವಸ್ವರ್ ಅವರ ಬಗ್ಗೆ ನಿಮಗೇನಾದರೂ ಗೊತ್ತಿದ್ದರೆ ಆಶ್ರಮಕ್ಕೆ ತಿಳಿಸಿ. ಆಶ್ರಮದ ಫೋನ್ ನಂ: 6364777100