ಯಲ್ಲಾಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಉದ್ಯೋಗ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರೆಯದಿದ್ದರೂ ವೇದಿಕೆ ಏರಿದ ಇಬ್ಬರು ಗಣ್ಯರು ಮುಜುಗರ ಅನುಭವಿಸಿದರು.
ಶಾಸಕ ಶಿವರಾಮ ಹೆಬ್ಬಾರ್ ಈ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದು, ನಿರ್ವಹಣೆ ಮಾಡುತ್ತಿದ್ದ ನಂದಿತಾ ಭಾಗ್ವತ್ ಅವರು ಶಾಸಕರ ಜೊತೆ ವಿವಿಧ ಇಲಾಖೆ ಅಧಿಕಾರಿಗಳನ್ನು ವೇದಿಕೆಗೆ ಆಮಂತ್ರಿಸಿದರು. ಆದರೆ, ಅಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸದ ಕಾರಣ ಅವರ ಖುರ್ಚಿ ಖಾಲಿಯಿದ್ದು, ವೇದಿಕೆಯಲ್ಲಿ ಖಾಲಿ ಇದ್ದ ಎರಡು ಖುರ್ಚಿಯಲ್ಲಿ ಜಿ ಪಂ ಮಾಜಿ ಸದಸ್ಯ ವಿಜಯ ಮಿರಾಶಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕೆ ಭಟ್ಟ ಮೆಣಸುಪಾಲ ಆಸೀನರಾದರು.
ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತ ಮಾಡಿದ ಉಪನ್ಯಾಸಕ ಶರತಕುಮಾರ್ ವೇದಿಕೆಯಲ್ಲಿದ್ದ ಎಲ್ಲರನ್ನು ಸ್ವಾಗತಿಸಿದರು. ಆದರೆ, ಕಾರ್ಯಕ್ರಮ ಪಟ್ಟಿಯಲ್ಲಿರದ ಇಬ್ಬರ ಹೆಸರು ಉಚ್ಚರಿಸಲು ತಡವರಿಸಿದರು. ಸಭೆಯ ಅಧ್ಯಕ್ಷತೆವಹಿಸಿದ್ದ ಕ್ರಿಯೇಟಿವ್ ಕಂಪ್ಯುಟರ್ ಮುಖ್ಯಸ್ಥ ಶ್ರೀನಿವಾಸ ಮುರುಡೇಶ್ವರ ಅವರಲ್ಲಿ ಆ ಇಬ್ಬರು ಗಣ್ಯರ ಹೆಸರು ಕೇಳಿದರು. ಆಗ ಶ್ರೀನಿವಾಸ ಅವರು ವಿಜಯ ಮಿರಾಶಿ ಅವರ ಹೆಸರನ್ನು ಹೇಳಿದ್ದು, ನಂತರ ಕಾಲೇಜು ಆಡಳಿತ ಮಂಡಳಿ ಸದಸ್ಯ ವಿಜಯ ಮಿರಾಶಿ ಅವರನ್ನು ಶರತಕುಮಾರ್ ಅವರು ಸ್ವಾಗತಿಸಿದರು. ಇನ್ನೊಬ್ಬರ ಹೆಸರು ಏನು? ಎಂದು ಪ್ರಶ್ನಿಸಿದಾಗ ವೇದಿಕೆ ಮುಂದಿದ್ದ ಪತ್ರಕರ್ತ ಶಂಕರ ಭಟ್ಟ ತಾರಿಮಕ್ಕಿ ಎಲ್ಲರ ಮುಂದೆ ದೊಡ್ಡದಾಗಿ `ಅವರು ಎನ್ ಕೆ ಭಟ್ಟ ‘ ಎಂದು ತಿಳಿಸಿ, ಸ್ವಾಗತ ಕೋರುವಂತೆ ಮಾಡಿದರು.
ಉದ್ಘಾಟನೆ ನಂತರ ಭಾಷಣ ಮಾಡಿದ ಶಿವರಾಮ ಹೆಬ್ಬಾರ್ `ವೇದಿಕೆಯಲ್ಲಿರುವ ಎಲ್ಲರೂ ಅವರವರ ಸ್ಥಾನಕ್ಕೆ ಅನುಗುಣವಾಗಿ ಎತ್ತರಕ್ಕೆ ಬೆಳೆದಿದ್ದಾರೆ. ಉದ್ಯೋಗ ನೀಡಿದ ಕಂಪನಿಯ ಋಣ ಅಭ್ಯರ್ಥಿಗಳಿಗೆ ಇರಬೇಕು’ ಎಂದರು. ಬಾಶ್ ಕಂಪನಿ ಪ್ರತಿನಿಧಿ ಖಲಂ ಸಹ `ವೇದಿಕೆಯಲ್ಲಿ ಕೂತವರು ನೇರವಾಗಿ ಇಲ್ಲಿಗೆ ಬಂದಿಲ್ಲ. ಕಷ್ಟಪಟ್ಟು ಮೇಲೆ ಬಂದಿದ್ದಾರೆ’ ಎಂದು ತಮ್ಮ ಭಾಷಣದ ನಡುವೆ ಹೇಳಿದರು.
ವಂದನಾರ್ಪಣೆ ಮಾಡಿದ ಮೇಘಾ ದೇವಳಿ ವಿಜಯ ಮಿರಾಶಿ ಅವರ ಹೆಸರನ್ನು ಮರೆಯಲಿಲ್ಲ. ಆದರೆ, ಎನ್ ಕೆ ಭಟ್ಟ ಅವರ ಹೆಸರು ವಂದನಾರ್ಪಣೆ ಮಾಡಿದವರ ಬಾಯಲ್ಲಿಯೂ ಬರಲಿಲ್ಲ!